ಅರಸೀಕೆರೆ : ತಾಲ್ಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆಯಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಜಗನ್ಮಾತೆ ಅಮ್ಮನವರಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅದರಂತೆ ಭೀಮನ ಅಮಾವಾಸ್ಯೆಯಂದು ಶ್ರೀ ಚೇತನ್ ಮರಿದೇವರ ಪಾದಪೂಜೆಯನ್ನು ನೆರವೇರಿಸಲಾಯಿತು.

ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆ ಕಂದುಗಳಿಂದ ಸಿಂಗರಿಸಲಾಗಿತ್ತು. ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.ಸಂಜೆ 8 ಗಂಟೆಗೆ ಸುಕ್ಷೇತ್ರ ಕೋಡಿಮಠದ ಮಹಾತಪಸ್ವಿ ಶಿವಲಿಂಗಜ್ಜಯ್ಯಮೂರ್ತಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಹಾಗೂ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿದರು.

ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಚೇತನ್ ಮರಿದೇವರು, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗುರು ಇದ್ದಾಗ ಮಾತ್ರ ಬದುಕು ಸಮೃದ್ಧಿಯಾಗುತ್ತದೆ. ಉತ್ತಮ ಅರಿವು ಹಾಗೂ ಉತ್ತಮ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಗುರಿಯತ್ತ ಸಾಗಬೇಕು ಎಂದು ಹೇಳಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಹಣ ಗಳಿಕೆ, ಕೀರ್ತಿ ಹಾಗೂ ಜಂಜಾಟದ ಬದುಕಿನ ಹಿಂದೆ ಓಡುತ್ತಿರುವ ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿಯ ಬದುಕು ಅತ್ಯಗತ್ಯ. ಧರ್ಮವೇ ಶಾಂತಿ-ನೆಮ್ಮದಿಯ ಬದುಕಿಗೆ ಆಶಾಕಿರಣವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀಮತಿ ನೀಲಮ್ಮ ಶಂಕರಪ್ಪ ಹಾಗೂ ಮಕ್ಕಳು, ದುಮೇನಹಳ್ಳಿ ಮತ್ತು ಷಡಕ್ಷರಪ್ಪ ಹಾಗೂ ಮಕ್ಕಳು, ಹುಣಸೆಕಟ್ಟಿ ಇವರ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಾಡಾಳು ಗ್ರಾಮಸ್ಥರು ಸೇರಿದಂತೆ ಸೀತಾಪುರ, ಕೊಪ್ಪಲು, ಎರೇಹಳ್ಳಿ, ವೈಜಿಹಳ್ಳಿ, ಪಿ.ಹೊಸಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಕೆ.ಶಂಕರನಹಳ್ಳಿ, ಕಡಲಮಗ, ಡಿ.ಎಂ.ಕುರ್ಕೆ, ಶಶಿವಾಳ, ಹಾರನಹಳ್ಳಿ ಹಾಗೂ ಅಣ್ಣನಾಯಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ಸ್ವರ್ಣ ಗೌರಮ್ಮ ದೇವಿಯ ದರ್ಶನ ಪಡೆದು ಪುನೀತರಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *