
ಹಾಸನ : ಶರೀರದ ಸ್ವಾತಂತ್ರ್ಯಕ್ಕೆ ಯೋಗವೇ ಮೂಲ ಎಂದ ಸುರೇಶ್ ಪ್ರಜಾಪತಿಹಾಸನ: ಇಲ್ಲಿನ ಆರ್.ಸಿ. ರಸ್ತೆಯ ಗಂಧದ ಕೋಟೆ ಪಾರ್ಕ್ ಯೋಗ ಕೇಂದ್ರದಲ್ಲಿ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಯೋಗಾಭ್ಯಾಸವನ್ನು ಮಾಡಿಸುತ್ತಾ ಪ್ರಮುಖ ಯೋಗ ಶಿಕ್ಷಕರಾದ ಸುರೇಶ್ ಪ್ರಜಾಪತಿಯವರು ಮಾತನಾಡಿ, “ನಾವು ಇಂದು ದೇಶದ ಜಲ, ನೆಲ, ಮಣ್ಣಿನ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಂತೆಯೇ, ನಮ್ಮ ಶರೀರವನ್ನು ಕಾಯಿಲೆಗಳಿಂದ ಮುಕ್ತಗೊಳಿಸಿ ಸ್ವಸ್ಥ ಹಾಗೂ ಸುಖವಾಗಿಡುವುದು ಅತ್ಯಗತ್ಯ. ಮಾನವೀಯತೆಯ ದೃಷ್ಟಿಯಿಂದ ನಮ್ಮ ದೇಹವನ್ನು ರೋಗಗಳಿಂದ ಮುಕ್ತಗೊಳಿಸಲು ಯೋಗವು ಒಂದು ಅವಿಭಾಜ್ಯ ಅಂಗವಾಗಿದೆ. ಶರೀರದ ಒಂದೊಂದು ಅಂಗಕ್ಕೂ ಪ್ರತ್ಯೇಕ ಆಸನ ಮತ್ತು ಪ್ರಾಣಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಆಯಾ ಭಾಗಗಳನ್ನು ರೋಗಮುಕ್ತಗೊಳಿಸಬಹುದು. ಇದು ನಾವು ನಮ್ಮ ದೇಹದ ಅಂಗಾಂಗಗಳಿಗೆ ನೀಡುವ ನಿಜವಾದ ಸ್ವಾತಂತ್ರ್ಯವಾಗಿದೆ” ಎಂದು ವಿವರಿಸಿದರು.
ನಂತರ ಯೋಗ ಸಾಧಕಿ ಸಹೋದರಿ ಭಾರತಿಯವರು ನೆರೆದಿದ್ದ ಯೋಗ ಸಾಧಕರನ್ನು ಉದ್ದೇಶಿಸಿ ಮಾತನಾಡಿ, “ನಮಗೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ನಾವು ಎಷ್ಟರಮಟ್ಟಿಗೆ ಸ್ವಾತಂತ್ರ್ಯವಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇವಲ ಹಕ್ಕುಗಳನ್ನು ಕೇಳುವುದಷ್ಟೇ ಅಲ್ಲದೆ, ನಮ್ಮಿಂದ ದೇಶಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡಬಹುದು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕು” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಯೋಗ ಕೇಂದ್ರದ ಎಲ್ಲಾ ಯೋಗ ಸಾಧಕರು ಹಾಗೂ ಪಾರ್ಕಿಗೆ ಆಗಮಿಸಿದ್ದ ವಾಲಕರು (Walkers) ಜಂಟಿಯಾಗಿ ಅತ್ಯಂತ ಭಕ್ತಿಭಾವದಿಂದ ರಾಷ್ಟ್ರಗೀತೆ ಹಾಗೂ ‘ವಂದೇ ಮಾತರಂ’ ಗೀತೆಯನ್ನು ಹಾಡುವುದರ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.ಸಹೋದರಿ ಸುನೀತಾ ದೇಶಭಕ್ತಿ ಹಾಡು ಹಾಡಿದರು. ಎಲ್ಲರಿಗೂ ನಂತರ ಸಿಹಿ ಕೊಡಲಾಯಿತು.
