ಹಾಸನ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆಯನ್ನು ಕೂಡಲೆ ಇಳಿಸುವಂತೆ ಆಗ್ರಹಿಸಿ ರಾಜ್ಯ ಸರಕಾರದ ವಿರುದ್ಧ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಿದಲ್ಲದೇ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ ನ್ನು ದಾರದ ಮೂಲಕ ಎಳೆದುಕೊಂಡು ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಹೇಮವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಮೊದಲಿಗೆ ಇನ್ನೂ ಬರಗಾಲದ ಸಂಕಷ್ಟದಿಂದ ಜಿಲ್ಲೆ ಹಾಗೂ ರಾಜ್ಯದ ಜನಸಾಮಾನ್ಯರು, ರೈತರು ಹೊರಬರಲಾಗದೆ ತೊಂದರೆ ಪಡುತ್ತಿರುವಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ ತಲಾ ೩ ರೂ.ಗಳಿಗೂ ಅಧಿಕವಾಗಿ ಹೆಚ್ಚಳ ಮಾಡಿರುವುದನ್ನು ಜೆಡಿಎಸ್ ಪಕ್ಷ ಉಗ್ರವಾಗಿ ಖಂಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಜನರ ಪರ, ಬಡವರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನೀವು ಈಗ ಅದೇ ಶ್ರೀ ಸಾಮಾನ್ಯನ ಬದುಕಿಗೆ ಬೆಲೆ ಏರಿಕೆ ಮೂಲಕ ಸಂಕಷ್ಟ ತಂದೊಡ್ಡಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರದ ಜೊತೆಗೆ ಚುನಾವಣೆ ಗೆಲ್ಲಲೇಬೇಕು ಎಂಬ ಒಂದೇ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿಗೆ ತಂದ ನೀವು, ಅವುಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿರುವುದು ದುರದೃಷ್ಟಕರ. ಇದೇನಾ ನೀವು ದೇಶಕ್ಕೆ ನೀಡಿರುವ ಕರ್ನಾಟಕದ ಮಾಡೆಲ್ ಎಂದು ನಾಡಿನ ಜನರ ಪರವಾಗಿ ನಮ್ಮ ಪಕ್ಷ ಪ್ರಶ್ನಿಸಲು ಬಯಸುತ್ತದೆ ಎಂದರು.

ನಿಮ್ಮದೇ ಸಂಪುಟದ ಹಲವು ಸಚಿವರು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿಯೇ ಇಂಧನದ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನು ನೋಡಿದರೆ ಪೂರ್ವಾಪರ ಯೋಚಿಸದೇ, ಸಂಪನ್ಮೂಲ ಕ್ರೂಢೀಕರಣ ಮಾಡಿಕೊಳ್ಳದೆ ನೀವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ ಎಂದು ಇದರಿಂದ ತಿಳಿದು ಬರುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಉದ್ದೇಶಿಸಿ ಮಾತನಾಡುತ್ತಾ, ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಧನ ದರ ಕಡಿಮೆ ಇದೆ ಎಂದು ಸಮರ್ಥಿಸಿಕೊಳ್ಳುತ್ತಿರುವ ನಿಮ್ಮ ನಿಲುವು ಹಾಸ್ಯಾಸ್ಪದ.

ಪೆಟ್ರೋಲ್-ಡೀಸೆಲ್ ಮೇಲಿನ ಬೆಲೆ ಏರಿಕೆಯಿಂದ ಸಾಗಣೆ ವೆಚ್ಚ ಹಾಗೂ ಅಗತ್ಯ ವಸ್ತುಗಳ ಬೆಲೆ ಸಹಜವಾಗಿಯೇ ಏರಲಿದೆ. ಇದರಿಂದ ಜನ ಸಾಮಾನ್ಯರ ಜೀವನದ ಮೇಲೆ ದೊಡ್ಡ ಹೊಡೆತ ಬೀಳಲಿದೆ.

ಹಿಂದೆಲ್ಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಬಡ ಜನರ ಜೀವ-ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಬೊಮ್ಮೆ ಹೊಡೆಯುತ್ತಿದ್ದ ನೀವು, ಈಗ ಮಾಡಿರುವುದೇನು ಎಂಬುದನ್ನು ನಾಡಿನ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಮೊದಲೇ ಬರದ ಪೆಟ್ಟಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳ ಜಪದಲ್ಲಿ ನಿಮ್ಮ ಸರ್ಕಾರ ಅಭಿವೃದ್ಧಿಯನ್ನೇ ಸಂಪೂರ್ಣವಾಗಿ ಮರೆತಿದೆ. ಸಮಸ್ತ ಜನರ ಪರವಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಅದೇ ಜನರ ಮೇಲೆ ತೆರಿಗೆಯ ಭಾರ ಹೊರಿಸುವುದು ನಿಜಕ್ಕೂ ಖಂಡನೀಯ. ಕೂಡಲೇ ಇಂಧನದ ಮೇಲಿನ ತೆರಿಗೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಅಲ್ಲದೆ ಬರುವ ಅಧಿವೇಶನದಲ್ಲಿಯೂ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಜೆಡಿಎಸ್ ವಕ್ತಾರ ಹೊಂಗೆರೆ ರಘು, ಜಿಲ್ಲಾ ಪಂಚಾಯತ್ ಮಾಜಿ ಅದ್ಯಕ್ಷಬಿ.ಆರ್. ಸತ್ಯನಾರಾಯಣ್, ಜೆಡಿಎಸ್ ತಾಲೂಕು ಅದ್ಯಕ್ಷ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಜಿಲ್ಲಾ ನೌಕರರ ಮಾಜಿ ಗೌರವಾದ್ಯಕ್ಷ ರುದ್ರಫ್ಪ, ಮೊಸಳೆ ಹೊಸಹಳ್ಳಿ ಚಂದ್ರೇಗೌಡ, ಪ್ರೇಮಮ್ಮ, ನಗರಸಭೆ ಸದಸ್ಯರುಗಳಾದ ಚಂದ್ರೇಗೌಡ, ಸೈಯದ್ ಅಕ್ಬರ್, ಯೋಗೇಂದ್ರ ಬಾಬು, ಅಮೀರ್ ಜಾನ್, ಬಟ್ಟೆ ಗೋಪಾಲ್, ಸಮೀರ್ ಹಾಗೂ ಬಿಜೆಪಿ ಮುಖಂಡ ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *