ಹಾಸನ: ಪೆನ್ ಡ್ರೈವ್ ನಲ್ಲಿ ಲಭ್ಯವಾಗಿರುವಂತೆ ಸಾವಿರಾರು ಮಹಿಳೆಯರ ಮೇಲೆ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರನ್ನು ಬಂಧಿಸಿ ಸಿಬಿಐ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳ ಮೇಲೆ ಕಠಿಣ ಕಾನೂನುಕ್ರಮ ಕೈಗೊಂಡು, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ನ್ಯಾಯ ಮತ್ತು ರಕ್ಷಣೆ ನೀಡುವಂತೆ ಬಿಎಸ್ಪಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ಕಳೆದೆ ಕೆಲವು ದಿನಗಳಿಂದ ಹಾಸನದಲ್ಲಿ ಲಭ್ಯವಾಗಿರುವ ಪೆನ್ ಡ್ರೈವ್ ನಲ್ಲಿರುವ ದಾಖಲೆಗಳ ಅನ್ವಯ ಹಾಗೂ ವಿವಿಧ ಮಾದ್ಯಮಗಳಲ್ಲಿ ಬಿತ್ತರವಾಗಿರುವ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಲೈಂಗಿಕ ಚಿತ್ರಗಳು ಮತ್ತು ವೀಡಿಯೋ ದೃಶ್ಯಗಳನ್ನು ಹಂಚಲಾಗಿರುವ ಮಾದ್ಯಮಗಳಲ್ಲಿ ಬಿತ್ತರವಾಗಿತ್ತಿವೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸ್ ಅಪ್ ಗಳಲ್ಲಿ ಹರಿದಾಡುತ್ತಿವೆ.

ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮತ್ತು ಆತಂಕ ವ್ಯಕ್ತವಾಗುತ್ತಿದೆ. ಪ್ರತೀ ದಿನ ಹೊಸ ಹೊಸ ವೀಡಿಯೋಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಚಿತ್ರಗಳು ಮತ್ತು ವೀಡಿಯೋಗಳಿಂದಾಗಿ ಸಂತ್ರಸ್ತ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ ಎಂದರು.

ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್ ಡ್ರೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗಿ ಪೋಟೋಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಎಂಬ ಆತಂಕ ಮತ್ತು ಕುತೂಹಲ ಎಲ್ಲೆಡೆ ಹರಡಿದೆ. ಇದೊಂದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಇಡೀ ದೇಶವನ್ನು ಆಳಿದ ಮಾಜಿ ಪ್ರಧಾನಿಗಳ ಕುಟುಂಬದಲ್ಲಿ ಪ್ರಜೆಗಳು ತಮಗೆ ನೀಡಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾವಿರಾರು ಮಹಿಳೆಯರ ಮೇಲೆ ಈ ರೀತಿ ಲೈಂಗಿಕ ದೌರ್ಜನ್ಯ ಎಸಗಿರುವುದು ಜಾಗತಿಕ ಮಟ್ಟದಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದೂರಿದರು.

ರಾಜಕೀಯ ಅಧಿಕಾರ, ಹಣ, ಆಸ್ತಿಯ ಮದದಿಂದ ಮೆರೆಯುತ್ತಿರುವ ಹಾಸನ ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬದ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿರುವುದಲ್ಲದೆ ಆ ನಗ್ನ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.

ಮಹಿಳೆಯರನ್ನು ಈ ರೀತಿ ಕಾಮತೃಷೆಗೆ ಬಳಸಿಕೊಳ್ಳಲು ಅವನು ತನಗಿರುವ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನುವುದೂ ಸ್ಪಷ್ಟವಾಗಿದೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿ ಜನಪ್ರತಿನಿಧಿಯಾಗಿ ಇರುವುದಿರಲಿ ನಾಗರಿಕ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವುದು ಬಹಳ ಅಪಾಯಕಾರಿಯಾದ ಮತ್ತು ಆತಂಕಕಾರಿಯಾದ ಸಂಗತಿಯಾಗಿದೆ. ಈತನ ಈ ಕುಕೃತ್ಯದಿಂದಾಗಿ ಹಲವಾರು ಕುಟುಂಬಗಳ ಮಹಿಳೆಯರ ಬದುಕು ಛಿದ್ರಗೊಳ್ಳುತ್ತಿದೆ. ಆದ್ದರಿಂದ ಈಗ ದಾಖಲಾಗಿರುವ ಪ್ರಕರಣಗಳ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ಇವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇಷ್ಟೆಲ್ಲಾ ಘೋರವಾದ ಅಪರಾಧ ನಡೆದು ಹಾದಿ ಬೀದಿಯಲ್ಲಿ ಚರ್ಚೆಗಳು ನೆಡೆಯುತ್ತಿದ್ದರೂ ಆರೋಪಿಗಳು ನಮ್ಮ ದೇಶದಿಂದಲೇ ಪರಾರಿಯಾಗಿದ್ದು ಹೇಗೆ ಮತ್ತು ಯಾರು ಸಹಾಯ ಮಾಡಿದರು ಎಂಬ ಅನುಮಾನಗಳು ಕಾಡುತ್ತಿವೆ. ಸಾರ್ವಜನಿಕವಾಗಿ ಇಷ್ಟೆಲ್ಲಾ ಅನಾಹುತ ನಡೆದು ಆತಂಕ ಹರಡಿರುವಾಗ ಈ ಕುರಿತು ಇಷ್ಟು ದಿನ ಮೌನವಹಿದ್ದ ರಾಜ್ಯ ಸರ್ಕಾರ ಈಗ ಎಚ್ಚೆತ್ತುಕೊಂಡು ಇಡೀ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಆದರೆ ಎಸ್.ಐ.ಟಿ. ಯಿಂದ ಈ ಪ್ರಕರಣವನ್ನು ಭೇದಿಸಲು ಸಾಧ್ಯವಿಲ್ಲ ಎಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂತಹ ಗಂಭೀರ ಸ್ವರೂಪದ ಪ್ರಕರಣವನ್ನು ಸಿಬಿಐ ಗೆ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ತಂಡಕ್ಕೆ ಒಪ್ಪಿಸುವ ಮೂಲಕ ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕೆಂದು ಕೋರಿದರು.

ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರಾಗಿರುವ ಮಹಿಳೆಯ ಗೌಪ್ಯತೆಯನ್ನು ಕಾಪಾಡಬೇಕು. ಸಂತ್ರಸ್ತ ಮಹಿಳೆಯರಿಗಾಗಿ ಪ್ರತ್ಯೇಕ ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆಯಬೇಕು. ಹಾಗೂ ಸಂತ್ರಸ್ಥ ಮಹಿಳೆಯರು ಸ್ವಯಂ ಪ್ರೇರಿತರಾಗಿ ಮತ್ತು ನಿರ್ಭೀತಿಯಿಂದ ತಮ್ಮ ಮೇಲೆ ನಡೆಯಲಾರುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ದಾಖಲಿಸಲು ಸಾಧ್ಯವಾಗುವಂತೆ ಹಾಸನದಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾದ ದೂರು ಕೇಂದ್ರಗಳನ್ನು ಸ್ಥಾಪಿಸಬೇಕು ಜೊತೆಗೆ ದೂರು ನೀಡಿದವರ ಗೌಪ್ಯತೆ ಕಾಪಾಡಬೇಕು ಹಾಗೂ ದೂರು ದಾಖಲಿಸಲು ಬರುವ ಸಂತ್ರಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು.

ಈ ಪ್ರಕರಣದಲ್ಲಿ ಎಂತಹ ಪ್ರಭಾವಿಗಳ ಕೈವಾಡ ಇದ್ದರೂ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಸಂಯೋಜಕ ಮಲ್ಲಯ್ಯ, ಜಿಲ್ಲಾ ಉಪಾಧ್ಯಕ್ಷ ಲೋಹಿತ್ ಕಡೇಗರ್ಜೇ, ಕಿರಣ್ ಕುಮಾರ್, ಸಿ.ಜಿ. ಸೋಮಶೇಖರ್ ರೂಪ ಮೋಹನ್, ಬಿ.ವಿ. ಸುರೇಂದ್ರ, ರಾಜು, ಸಿದ್ದಲಿಂಗಯ್ಯ, ರಾಜು ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed