ಹಾಸನ: ನಾಡಪ್ರಭು ಕಂಪೇಗೌಡರು ಸರ್ವ ಜನಾಂಗದವರ ಅನುಕೂಲಕ್ಕಾಗಿ ಬೆಂಗಳೂರನ್ನು ತಮ್ಮ ಕಲ್ಪನೆಯಲ್ಲಿ ನಿರ್ಮಿಸಿದ್ದಾರೆ. ಇಂತಹ ಮಹಾನೀಯರ ನೆನಪು ಮಾಡಿಕೊಳ್ಳಲು ಮುಂದಿನ ವರ್ಷದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡುವುದರ ಜೊತೆಗೆ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಂತಹ ಮಹಾನಗರ ನಿರ್ಮಾಣಕ್ಕೆ ಕಾರಣಕರ್ತರಾಗಿ ಸರ್ವಜನಾಂಗದವರು ದೇಶ ವಿದೇಶಗಳಿಂದ ಬಂದಂತಹ ಎಲ್ಲಾರು ಜೀವನ ನಡೆಸುವುದಕ್ಕೆ ಕಾರಣಕರ್ತರಾಗಿದ್ದಾರೆ. ಇಂತಹ ಮಹಾನೀಯರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸರ್ವ ಜನಾಂಗದವರನ್ನು ಗುರುತಿಸಿ ಸನ್ಮಾನ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ವರ್ಷದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಿ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದರು.

ಹಿಂದೆ ಕಟ್ಟಿದಂತಹ ಕೆಂಪೇಗೌಡರ ಸುಂದರ ನಾಡನ್ನು ಉಳಿಸಿಕೊಂಡು ಹೋದರೇ ಸಾಕು ಎಂದು ಕಿವಿಮಾತು ಹೇಳಿದರು. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಉತ್ತಮ ವಾತವರಣ ನಿಮಾಣ ಮಾಡಿ ಹಾಸನವನ್ನು ಅಭಿವೃದ್ಧಿಯತ್ತ ಕೊಂಡೂಯ್ಯೊಣ ಎಂದು ಕರೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡುತ್ತಾ, ಎಲ್ಲಾ ಜಯಂತಿಗಳು, ಎಲ್ಲಾ ಮಹಾತ್ಮರೂ, ಎಲ್ಲಾ ಪುಣ್ಯ ಪುರುಷರು ಅವರು ತಮಗಾಗಿ ಏನು ಮಾಡಲಿಲ್ಲ. ತನ್ನ ಪ್ರಜೆಗಳಿಗಾಗಿ ಮತ್ತು ಅವರ ಯೋಗಕ್ಷೇಮಕ್ಕಾಗಿ ಬೇರೆಯವರಿಗೆ ಒಳ್ಳೆಯದನ್ನ ಮಾಡಿರುವುದಕ್ಕೆ ಅವರು ಮಹಾತ್ಮರಾಗಿದ್ದಾರೆ. ಅವರನ್ನು ನಾವು ನೆನಪಿಸುತ್ತಿರುವುದು ಎಂದರೇ ಅವರು ನಮ್ಮ ಹೃದಯದಲ್ಲಿ ಇದ್ದಾರೆ. ಸಮಾಜವು ಹೆಮ್ಮೆಪಡುವಂತಹ ವ್ಯಕ್ತಿ ನಮ್ ಮುಂದೆ ಇದ್ದಾರೆ. ಕೆಂಪೇಗೌಡರು ಎಂದರೇ ಕೇವಲ ಒಕ್ಕಲಿಗರ ಗೌಡರ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ ಎಂದರು.

ಅವರ ವ್ಯಕ್ತಿತ್ವ, ದೂರದೃಷ್ಠಿವುಳ್ಳವರಾಗಿದ್ದಾರೆ. ನಾಡಿನ ಅರಸುನಾದವನಿಗೆ ಇರಬೇಕಾದ ದೂರದೃಷ್ಠಿತ್ವ ಅವರಲ್ಲಿ ಅಂದೆ ಇತ್ತು. ಅವರು ಹಾಕಿಕೊಟ್ಟ ನಗರದಲ್ಲಿ ನಾವುಗಳು ವಾಸ ಮಾಡುತ್ತಿದ್ದೇವೆ. ಕೆಂಪೇಗೌಡರು ಎಲ್ಲಾರೂ ನೆನೆಯುವಂತಹ ಕೆಲಸ ಮಾಡಿದ್ದಾರೆ. ಬೆಂದ ಕಾಳೂರು ಎನ್ನುವ ಹೆಸರು ಬೆಂಗಳೂರಿಗೆ ಹೆಸರು ಇದೆ. ಯಾವತ್ತು ಸ್ವಾರ್ಥ ಮಾಡದೇ ನಿಶ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಕಿವಿಮಾತು ಹೇಳಿದರು.

ಕನ್ನಡ ಎಂದರೇ ಕೆಂಪೇಗೌಡ ಎಂದು ಕರೆಯುತ್ತಾರೆ. ಬೆಂಗಳೂರು ಯಾವಾಗಲು ನಮಗೆ ಅಚ್ಚ ಹಸಿರಾಗಿರಲಿ ಎಂದು ಹೇಳಿದರು.

ಜಿ.ಎಲ್. ಮುದ್ಧೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಹೆಣ್ಣು ಮಕ್ಕಳು ಅಭಿವೃದ್ಧಿ ಆಗದಿದ್ದರೇ ಸಮಾಜ ಅಭಿವೃದ್ಧಿಯಾಗುವುದಿಲ್ಲ. ಕೆಂಪೇಗೌಡರು ಅಂದಿನ ಕಲ್ಪನೆಯಂತೆ ಬೆಂಗಳೂರು ನಿರ್ಮಾಣಕ್ಕೆ ಮುಂದಾದರು. ಸುಮಾರು ೫೦೦ ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೆಗೌಡರಿಗೆ ಸಲ್ಲುತ್ತದೆ ಎಂದರು. ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಹೇಳಿದರು.

ಕನ್ನಡ ಅಭಿವೃರ್ದಧಿ ಪ್ರಾಧಿಕಾರದ ಸದಸ್ಯರಾದ ಗುರುರಾಜ್ ಉಪನ್ಯಾಸದಲ್ಲಿ ಮಾತನಾಡಿ, ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ ೧೫೧೦ರಲ್ಲಿ ಯಲಹಂಕದಲ್ಲಿ ಜನಿಸಿದ ಮೊದಲನೆಯ ಕೆಂಪೇಗೌಡರು ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಕಾರಣ ಕೆಂಪನಂಜೇಗೌಡ ದಂಪತಿಗಳು ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆಯುತ್ತಿರುತ್ತಾರೆ.

ಬಾಲಕ ಕೆಂಪಯ್ಯನನ್ನು ಪ್ರಜೆಗಳು ಗೌರವಾದರದಿಂದ, ಚಿಕ್ಕರಾಯ, ಕೆಂಪರಾಯ ಎಂದು ಸಂಭೋಧಿಸುತ್ತಿರುತ್ತಾರೆ. ಹಳೆ ಬೆಂಗಳೂರಿನ ಸೋದರಮಾವನ ಮಗಳಾದ ಚೆನ್ನಾಂಬೆಯವರೊಡನೆ (ಚೆನ್ನಮ್ಮ)ಮದುವೆ ಹಾಗೂ ಇದೇ ಸಂಧರ್ಭದಲ್ಲಿ ಯುವರಾಜ ಪಟ್ಟಾಭಿಷೇಕವನ್ನು ಮಾಡಲಾಗುತ್ತದೆ.

ರಾಜಧಾನಿಯ ನಿರ್ಮಾಣ ಕಾರ್ಯಕ್ಕೆ ಅಪಾರ ಹಣದ ಅವಶ್ಯಕತೆ ಇದ್ದಿದ್ದರಿಂದಾಗಿ ಗೌಡರು ಅಗತ್ಯವಾದ ಧನ ಸಹಾಯ ಮಾಡಬೇಕೆಂದು ತಮ್ಮ ವ್ಯಾಪ್ತಿಯ ಪ್ರದೇಶದ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಮನವಿಗೆ ಓಗೊಟ್ಟ ಹಲಸೂರು, ಜಿಗಣಿ, ಬಾಣಾವರ, ಬೇಗೂರು, ತಲಘಟ್ಟಪುರ, ಕುಣಿಗಲ್ ಮತ್ತಿತರ ಕಡೆಗಳಿಂದ ಸ್ವಲ್ಪ ಪ್ರಮಾಣದ ಹಣ ಹರಿದು ಬರುತ್ತದೆ. ಉಳಿದಂತೆ ನಿರ್ಮಾಣ ಕಾರ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಗಾಡಿಗಳ ಮೂಲಕ ಕೆಲವರು ತಲುಪಿಸುತ್ತಾರೆ ಮತ್ತು ಕೋಟೆಯ ನಿರ್ಮಾಣದಲ್ಲಿ ನೆರವಾಗಲು ನೂರಾರು ಮಂದಿ ಸ್ವಪ್ರೇರಿತರಾಗಿ ಮುಂದೆ ಬರುವುದಾಗಿ ಗೌಡರಿಗೆ ಧೈರ್ಯ ನೀಡುತ್ತಾರೆ.

ಆಸ್ಥಾನದ ಪ್ರಮುಖರೊಂದಿಗೆ ಚರ್ಚಿಸಿ ಗುರುತಿಸಿದ ಪ್ರದೇಶದಲ್ಲಿ ಕೋಟೆ, ಪೇಟೆ, ಗುಡಿ, ಕೆರೆ ಮತ್ತು ಉದ್ಯಾನ ಈ ಐದು ಅಂಗಗಳಿಂದ ಕೂಡಿದ ರಾಜಧಾನಿಯ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸುತ್ತಾರೆ. ನಂತರ ಪುರೋಹಿತರಿಂದ ನಗರ ನಿರ್ಮಾಣಕ್ಕೆ ಮುಹೂರ್ತವನ್ನು ನಿಗದಿ ಮಾಡಿಸುತ್ತಾರೆ. ಅಮಾತ್ಯರಾಗಿದ್ದ ಗಿಡ್ಡೇಗೌಡರನ್ನು ವಿಜಯನಗರಕ್ಕೆ ತೆರಳಿ ಅರಸರನ್ನು ಕಂಡು ನಗರ ನಿರ್ಮಾಣಕ್ಕೆ ಸ್ವಲ್ಪ ಮಟ್ಟಿನ ಹಣಕಾಸಿನ ನೆರವು ನೀಡುವಂತೆ ಕೋರಿಕೊಂಡು ಬರುವಂತೆ ಕಳುಹಿಸುತ್ತಾರೆ ಎಂದರು.

ಗೌಡರೂ ಸಹ ಬಾಗಿಲು ನಿಂತ ಸಂಭ್ರಮದಲ್ಲಿ ಅರಮನೆಗೆ ಹಿಂದಿರುಗಿ ಮನೆ ಮಂದಿಯ ಜೊತೆ ಸಂತಸ ಹಂಚಿಕೊಳ್ಳುತ್ತಾರೆ. ಆದರೆ ಮರುದಿನ ಬೆಳಿಗ್ಗೆ ದೂತರು ಓಡಿಬಂದು ಬಾಗಿಲು ಬಿದ್ದು ಹೋಗಿರುವ ಸುದ್ದಿಯನ್ನು ಗೌಡರಿಗೆ ಮುಟ್ಟಿಸುತ್ತಾರೆ. ಒದಗಿದ ವಿಘ್ನವನ್ನು ಕಂಡು ಹೌಹಾರಿದ ಗೌಡರು ಸ್ಥಳಕ್ಕೆ ಬಂದು ಎಲ್ಲವನ್ನು ಪರಿಶೀಲಿಸುತ್ತಾರೆ. ಕೆಲಸಗಾರರು ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೂ ಮತ್ತೆ ಬಾಗಿಲು ಬಿದ್ದಿರುವುದನ್ನು ನೋಡುತ್ತಾರೆ. ಭೂತದ ಚೇಷ್ಟೆಯೆಂದೂ ಇದರ ಶಮನಕ್ಕಾಗಿ ತುಂಬುಗರ್ಭಿಣಿಯೊಬ್ಬಳ ಬಲಿಯ ಅವಶ್ಯಕೆತೆಯಿದೆಯೆಂಬುದು ತಿಳಿಯುತ್ತದೆ.

ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಗೌಡರಿಗೆ ಈ ವಿಚಾರ ನುಂಗಲಾರದ ತುತ್ತಾಗುತ್ತದೆ. ಗರ್ಭಿಣಿಯನ್ನು ಬಲಿ ನೀಡುವುದು ಸಾಧ್ಯವಿಲ್ಲವೆಂದು ನಿರ್ಧರಿಸುತ್ತಾರೆ. ಪ್ರತಿ ದಿನ ಬಾಗಿಲನ್ನು ನಿಲ್ಲಿಸಿ ಬರುವುದು. ಬೆಳಿಗ್ಗೆಯ ವೇಳೆಗೆ ಬೀಳುವುದು ಇದೇ ಪುನರಾವರ್ತನೆಯಾಗತೊಡಗುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದ ಸೊಸೆ ಲಕ್ಷ್ಮಿದೇವಿ ಮಾವನವರ ಕೊರಗನ್ನು ಕಂಡು ತಾನೇ ಬಲಿದಾನ ಮಾಡಿಕೊಳ್ಳುವ ತೀರ್ಮಾನಕ್ಕೆ ಬರುತ್ತಾಳೆ.

ಒಂದು ರಾತ್ರಿ ಯಾರಿಗೂ ತಿಳಿಯದಂತೆ ಕೋಟೆಯ ಬಾಗಿಲ ಬಳಿ ಹೋಗಿ ಮನೆ ದೇವರನ್ನು ನೆನೆದು ಕೋಟೆಯ ಬಾಗಿಲು ನಿಲ್ಲಲೆಂದು ಪ್ರಾರ್ಥಿಸಿ ತನ್ನನ್ನೇ ಅರ್ಪಿಸಿಕೊಳ್ಳುತ್ತಾಳೆ. ಕೆಂಪೇಗೌಡರು ಅನ್ಯ ಜಾತಿಯ ಧರ್ಮಿಯರಿಗೆ ಕಟ್ಟಿದ ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಮನವರ್ತಪೇಟೆ, ಕಬ್ಬನ್ಪೇಟೆ, ಬಿನ್ನಿಪೇಟೆಗಳು, ಉದ್ಯಾನಗಳು, ಕೆರೆಗಳು, ನಗರದ ಯೋಜನೆಗಳು ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಕೃಷಿ ಕೆಲಸಗಳಿಗೆ ಮತ್ತು ಕುಡಿಯುವ ನೀರಿಗಾಗಿ ತಮ್ಮ ಆಳ್ವಿಕೆಗೆ ಒಳಪಟ್ಟ್ಟ ಬಹುತೇಕ ಎಲ್ಲ ಹಳ್ಳಿಗಳ ಸುತ್ತ ಮುತ್ತ ಕೆರೆ-ಕಟ್ಟೆ ಮತ್ತು ಬಾವಿಗಳನ್ನು ಕಟ್ಟಿಸಿದ್ದರೆಂಬುದು ನಿಜವೇ. ಅಂತೆಯೇ ನೀರಿನ ಸಂಗ್ರಹಣೆ ಮಾಡಿ ಧಾರ್ಮಿಕ ಕಾರ್ಯಗಳಿಗೆ ನೆರವಾಗಲೆಂದು ನಾಡಿನಲ್ಲಿದ್ದ ದೇವಾಲಯ ಗಳ ಬಳಿಯಲ್ಲೆಲ್ಲ ಒಂದರಂತೆ ಸುಮಾರು ನೂರಕ್ಕೂ ಹೆಚ್ಚು ಕಲ್ಯಾಣಿಗಳನ್ನೂ ನಿರ್ಮಿಸಿದ್ದರು.

ಅವುಗಳಲ್ಲಿ ಅಣ್ಣಮ್ಮ ದೇವಾಲಯದ ಹತ್ತಿರವಿದ್ದ ಕಲ್ಯಾಣಿ, ಚಿಕ್ಕ ಲಾಲ್‌ಬಾಗ್, ಚಿಕ್ಕಪೇಟೆ, ಸಿದ್ದಿಕಟ್ಟೆ, ಸಂಪಂಗಿನಗರ ಮುಂತಾದ ಪ್ರದ ಪ್ರದೇಶಗಳಲ್ಲಿದ್ದ ಕಲ್ಯಾಣಿಗಳು ಪ್ರಸಿದ್ದವಾಗಿದೆ ಎಂದು ನಾಡಪ್ರಭು ಕೆಂಪೇಗೌಡರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಮೊದಲು ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಿಂದ ಬೆಳ್ಳಿ ಸಾರೋಟದಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡದೊಡನೆ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಲಾಭವನದಲ್ಲಿ ಕೊನೆಗೊಂಡಿತು.

ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಿವಿಧ ಜನಾಂಗದವರನ್ನು ಸನ್ಮಾನಿಸಿಗೌರವಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕೂಡ ಅಭಿನಂಧಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್ ಮಹಮ್ಮದ್ ಸುಜೀತ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್. ರಘುಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಪಿ. ತಾರನಾಥ್, ಕಸಾಪ ಜಿಲ್ಲಾಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್ ಗೌಡ ಇತರರು ಭಾಗವಹಿಸಿದ್ದರು. ಸಮಾಜಸೇವಕ ಯದೀಶ್ ಕಾರ್ಯಕ್ರಮ ನಿರೂಪಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *