ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪ ಅವರ ನಡುವಿನ ಆರೋಪ-ಪ್ರತ್ಯಾರೋಪಗಳ ಜಗಳ ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರೋಹಿಣಿ ಸಿಂಧೂರಿ ಹೂಡಿದ್ದ ದಾವೆಯನ್ನು ಪರಿಗಣಿಸಿರುವ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಐಪಿಎಸ್‌ ಅಧಿಕಾರಿ ಡಿ.

ರೂಪಾ ಅವರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶ ನೀಡಿದೆ.

ಡಿ.ರೂಪಾ ಅವರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ 24ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಿ.ಸಿ ಚಂದ್ರಶೇಖರ್‌ ಅವರು ಐಪಿಸಿ ಸೆಕ್ಷನ್‌ 500ರ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಿ, ಏ. 26ಕ್ಕೆ ವಿಚಾರಣೆ ಮುಂದೂಡಿದ್ದಾರೆ.

ಡಿ.ರೂಪಾ ಮೌದ್ಗಿಲ್ ಅವರು 2023ರ ಫೆ. 18 ಮತ್ತು 19ರಂದು ಫೇಸ್‌ಬುಕ್​ನಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಈ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದ್ದಾರೆ. ಇದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾ.3ರಂದು ಖಾಸಗಿ ದೂರು ದಾಖಲಿಸಿದ್ದರು.

ರೋಹಿಣಿ ಸಿಂಧೂರಿ ಅವರು ತಮ್ಮ ಪರ ವಕೀಲ ಸಿ.ವಿ ನಾಗೇಶ್‌ ಮೂಲಕ ಡಿ.ರೂಪಾ ಅವರಿಗೆ ಲೀಗಲ್‌ ನೋಟಿಸ್‌ ನೀಡಿದ್ದರು. ಈ ನೋಟಿಸ್‌ ತಲುಪಿದ 24 ಗಂಟೆಯ ಒಳಗಾಗಿ ರೂಪಾ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *