ಸರ್ಕಾರದ ಕಾರ್ಯಕ್ರಮ ತಲುಪಿಸುವಲ್ಲಿ ಹಿಂದೆ ಬಿದ್ದು ಬಿಜೆಪಿ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ನಾವು ಮತ್ತೆ ರಾಜ್ಯದಲ್ಲಿ ಪುಟಿದೇಳುತ್ತೇವೆ. ಸದ್ಯ ಜನರ ತೀರ್ಮಾನದಂತೆ ನಾವು ಸಮರ್ಥ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶದ ಆರು ದಿನಗಳ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.‌ ಶಿವಕುಮಾರ್ ಆಯ್ಕೆ ಆಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದ ತೀರ್ಪು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.ರಾಜಕಾರಣದಲ್ಲಿ ಪಾತ್ರಗಳನ್ನು ತೀರ್ಮಾನಿಸುವುದು ಜನ. ನಮಗೆ ವಿಪಕ್ಷವಾಗಿ ಜನ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಮೇಲೆ ಜನ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ಗ್ಯಾರಂಟಿಗಳ ಮೇಲೆ ಜನರಿಗೆ ದೊಡ್ಡ ವಿಶ್ವಾಸ ಇದೆ. ಅದನ್ನು ಅವರು ಪೂರೈಸಬೇಕಾಗಿದೆ. ಪೂರೈಸುವ ವೇಳೆ ರಾಜ್ಯದ ಆರ್ಥಿಕ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳುವುದು ಕೂಡ ಅವರ ಜವಾಬ್ದಾರಿ. ಯಾವ ರೀತಿ ನಿಭಾಯಿಸುತ್ತಾರೆ ಅಂತಾ ಕಾದು ನೋಡೋಣ ಎಂದು ಅವರು ಹೇಳಿದರು.ವಿಪಕ್ಷವಾಗಿ ನಾವು ಜವಾಬ್ದಾರಿಯಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ನೆಲ-ಜಲ ವಿಚಾರದಲ್ಲಿ ರಾಜಕೀಯ ಬೆರೆಸದೇ ಕೆಲಸ ಮಾಡಬೇಕು. ಜನರಿಗೆ ಅನ್ಯಾಯ ಆದಾಗ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇವೆ. 2023 ರಾಜ್ಯದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಬಹಳ ಮಹತ್ವದ್ದು ಮತ್ತು ಸವಾಲುಗಳಿವೆ. ಕರ್ನಾಟಕ ಸುಭಿಕ್ಷವಾಗಿರುವ ನಾಡು. ಜನ ಶಾಂತಿಯನ್ನು ಮಾನ್ಯ ಮಾಡುವಂತಹವರು. ಕರ್ನಾಟಕದ ಅಭ್ಯುದಯ ದೇಶಕ್ಕೆ ಪರಿಣಾಮ ಬೀರುತ್ತದೆ. ಈ ಆಯಾಮಗಳ ಮೇಲೆ ವಿಪಕ್ಷವಾಗಿ ನಾವು ಇರುತ್ತೇವೆ ಎಂದರು.ಬಿಜೆಪಿ ಮತ್ತೆ ಪುಟಿದೇಳುತ್ತದೆ: ಬೊಮ್ಮಾಯಿ ವಿಶ್ವಾಸಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿನ ಪರಾಮರ್ಶೆ ಬೇರೆ ಬೇರೆ ಹಂತದಲ್ಲಿ ನಡೆಯುತ್ತಿದೆ. ಎರಡು ಮೂರು ದಿನಗಳಲ್ಲಿ ಶಾಸಕರ ಮತ್ತು ಪರಾಜಿತ ಅಭ್ಯರ್ಥಿಗಳ ಸಭೆ ಮಾಡುತ್ತೇವೆ. ಅದೇ ಸಭೆಯಲ್ಲಿ ವಿಪಕ್ಷ ನಾಯಕರ ತೀರ್ಮಾನ ಮಾಡುತ್ತೇವೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್ ಮುಂದೆ ಇದ್ದಿದ್ದು ಸೋಲಿಗೆ ಕಾರಣವಾಗಿದೆ. ನಾವು ಆತ್ಮ ಸ್ಥೈರ್ಯ ಕಳೆದುಕೊಂಡಿಲ್ಲ. ನಾವು ಮತ್ತೆ ರಾಜ್ಯದಲ್ಲಿ ಪುಟಿದೇಳುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed