ಹಾಸನ : ಪೆನ್‌ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಿ ಮಹಿಳೆಯರನ್ನು ರಕ್ಷಿಸಲು ಆಗ್ರಹಿಸಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಗಾರರು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದರು.

ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೇಶ್ ಮತ್ತು ಕೆ.ಎಸ್. ವಿಮಲಾ ಮಾತನಾಡಿ, ಕೆಲ ದಿನಗಳಿಂದ ಹಾಸನದಲ್ಲಿ ಪೆನ್ ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸ್‌ಆಪ್‌ಗಳಲ್ಲಿ ಹರಿದಾಡುತ್ತಿವೆ.

ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತೀದಿನ ಹೊಸಹೊಸ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ.

ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್‌ಡೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗೀ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಆತಂಕ ಮತ್ತು ಕುತೂಹಲ ಎಲ್ಲೆಡೆ ಹರಡಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೊದಲ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಇವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದರು.

ಸಾರ್ವಜನಿಕವಾಗಿ ಇಷ್ಟೆಲ್ಲಾ ಅನಾಹುತ ನಡೆದು ಆತಂಕ ಹರಡಿರುವಾಗ ಈ ಕುರಿತು ತಡವಾಗಿಯಾದರೂ ಎಚ್ಚೆತ್ತುಕೊಂಡು ಇಡೀ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಸ್ವಾಗತಿಸುತ್ತದೆ. ಮತ್ತು ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಖಾಸಗಿ ಮತ್ತು ಸರ್ಕಾರಿ ಮಹಿಳಾ ನೌಕರರು ಹಾಗೂ ಅಧಿಕಾರಿಗಳು ಜೊತೆಗೆ ಮಹಿಳಾ ಪೋಲೀಸು ಅಧಿಕಾರಿಗಳೊಂದಿಗೆ ನಡೆಸಿರುವ ಲೈಂಗಿಕ ಚಟುವಟಿಕೆಗಳೂ ಇವೆ ಎನ್ನಲಾಗುತ್ತಿದೆ. ಅವನ ಮನೆಯ ಕೆಲಸ ಮಾಡುವ ಹೆಂಗಸಿನ ಮೇಲೂ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿ ಆ ದೃಶ್ಯಗಳನ್ನೂ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈತನ ಈ ಕುಕೃತ್ಯದಿಂದಾಗಿ ಹಲವಾರು ಮಹಿಳೆಯರ ಬದುಕು ಛಿದ್ರಗೊಳ್ಳುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.

ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ೨ ಸಾವಿರಕ್ಕೂ ಹೆಚ್ಚು ಪೋಟೋ, ವೀಡಿಯೋಗಳಿವೆ ಆ ಕುರಿತು ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಪೋಲೀಸರು ಕೂಡಲೇ ಅವರನ್ನು ವಿಚಾರಣೆಗೆ ಒಳಪಡಿಸಿದಲ್ಲಿ ಆ ವೀಡಿಯೋಗಳನ್ನು ಚಿತ್ರೀಕರಿಸಿರುವ ವ್ಯಕ್ತಿ ಯಾರು? ದೇವರಾಜೇಗೌಡರಿಗೆ ಆ ವೀಡಿಯೋಗಳನ್ನು ನೀಡಿರುವ ವ್ಯಕ್ತಿ ಯಾರು? ಎನ್ನುವುದು ಗೊತ್ತಾಗುತ್ತದೆ. ಮತ್ತು ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದರೆ ಆ ವ್ಯಕ್ತಿ ಯಾರ್ಯಾರಿಗೆ ಈ ವೀಡಿಯೋಗಳನ್ನು ನೀಡಿದ್ದಾನೆ. ಹಾಗೂ ಯಾರು ಈ ವೀಡಿಯೋಗಳನ್ನು ಪೆನ್‌ಡೈವ್ ಮುಖಾಂತರ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ ಎನ್ನುವ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಕೂಡಲೇ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಎಂದು ಒತ್ತಾಯಿಸಿದರು. ಸಂತ್ರಸ್ತ ಮಹಿಳೆಯರು ಮತ್ತವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುತ್ತದೆ.

ಹಕ್ಕೊತ್ತಾಯಗಳು: ತಡವಾಗಿಯಾದರೂ ಕರ್ನಾಟಕ ಸರ್ಕಾರ ಹಾಸನದ ’ಪೆನ್‌ಡೈವ್’ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ’ವಿಶೇಷ ತನಿಕಾ ದಳ ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಜೊತೆಗೆ ಪ್ರಕರಣದ ತನಿಖೆಗೆ ಹಾಗು ಆರೋಪಿಗಳ ಬಂಧನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಧಿಕಾರ ಮತ್ತು ಸೂಕ್ತ ವ್ಯವಸ್ಥೆಯನ್ನು ಎಸ್‌ಐಟಿಗೆ ಒದಗಿಸಬೇಕು. ಇಡೀ ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾಪರ ಸಂವೇದನೆ ಹೊಂದಿರುವ ಪೋಲೀಸು ಅಧಿಕಾರಿಗಳನ್ನು ಬಳಸಿಕೊಳ್ಳಬೇಕು.

ಮಹಿಳೆಯರ ಖಾಸಗಿ ಮತ್ತು ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಪೆನ್‌ಡ್ರೈವ್ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ವಾಟ್ಸ್‌ಆಪ್ ಮುಖಾಂತರ ಎಲ್ಲೆಡೆ ಹರಡಲು ಕಾರಣವಾದವರನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿಬೇಕು. ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಸಾವಿರಾರು ವೀಡಿಯೋಗಳನ್ನು ಒಳಗೊಂಡಿರುವ ’ಪೆನ್‌ಡ್ರೈವ್’ ತನ್ನ ಬಳಿ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಅವರಿಗೆ ಪೆನ್‌ಡೈಪ್ ಯಾರಿಂದ ಬಂತು ಆ ವ್ಯಕ್ತಿಯಿಂದ ಯಾರ್ಯಾರಿಗೆ ಪೆನ್‌ಡ್ರೈವ್ ಹಂಚಿಕೆಯಾಗಿದೆ ಮತ್ತು ಯಾವ ಮೊಬೈಲ್‌ನಿಂದ ಚಿತ್ರೀಕರಣವಾಗಿದೆ ಎನ್ನುವುದನ್ನು ಪತ್ತೆಹಚ್ಚಬೇಕು. ಹಾಗೂ ಮೊಬೈಲ್ ಮತ್ತು ಪೆನ್‌ಡೈವ್‌ಗಳನ್ನು ವಶಪಡಿಸಿಕೊಳ್ಳಬೇಕು ಹಾಗೂ ಅವುಗಳು ಸಾರ್ವಜನಿಕವಾಗಿ ಮತ್ತಷ್ಟು ಹಂಚಿಕೆಯಾಗದಂತೆ ತಡೆಗಟ್ಟಿ ಅವುಗಳನ್ನು ನಾಶಪಡಿಸಬೇಕು.

ಇಡೀ ಪ್ರಕರಣದ ತನಿಖೆಯಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದಂತೆ ಎಸ್‌ಐಟಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಅವರು ಮನವಿ ಸ್ವೀಕರಿಸಿದ ನಂತರ ಪ್ರತಿಭಟನಗಾರರನ್ನು ಉದ್ದೇಶಿಸಿ ಮಾತನಾಡಿ, ಪಾಪದ ಕೊಡ ತುಂಬಿದಾಗ ಗೊತ್ತಾಗುತ್ತದೆ. ಶಿಶುಪಾಲನಿಗೆ ಕೃಷ್ಣನು ನೂರು ತಪ್ಪು ಮಾಡಲು ಅವಕಾಶ ಕೊಟ್ಟಿದ್ದು, ನೂರಒಂದು ತಪ್ಪು ಮಾಡಲು ಅವಕಾಶ ಕೊಡುವುದಿಲ್ಲ. ಈ ವಿಚಾರ ನಮಗೂ ಗೊತ್ತಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಹಕಾರ ನಮ್ಮಕಡೆಯಿಂದ ಕೊಡಲಾಗುವುದು.

ಎಸ್.ಐ.ಟಿ. ಅವರು ಈ ಕೇಸನ್ನು ತನಿಖೆ ಮಾಡಲಿದ್ದು, ನಾನು ಕೂಡ ಮಹಿಳಾ ಆಯೋಗದಲ್ಲಿ ಒಂಬತ್ತು ತಿಂಗಳುಗಳ ಕಾಲ ಕರ್ತವ್ಯನಿರ್ವಹಿಸುವುದರಿಂದ ಮಹಿಳೆಯರ ಬಗ್ಗೆ ಗೊತ್ತಿದೆ. ಆಗೇ ಮಹಿಳೆಯರು ಕೂಟ ದಿಟ್ಟವಾಗಿರಬೇಕು. ಸ್ವತಂತ್ರ ಇರುವುದರಿಂದ ಪ್ರಾರಂಭದಲ್ಲೆ ಹೇಳಿಕೊಂಡು ಪ್ರತಿಭಟಿಸಬೇಕು. ಪ್ರಸ್ತುತ ಎಲ್ಲಾ ಹೆಣ್ಣು ತನ್ನನು ತಾನು ರಕ್ಷಣೆ ಮಾಡಿಕೊಳ್ಳಲು ಮುಂದುವರೆದಿದ್ದಾಳೆ. ನಿಮ್ಮ ಮನವಿಯಂತೆ ಮಹಿಳೆಯರ ಸಹಾಯವಾಣಿ ನಿರ್ಮಿಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ದೇವಿ, ಗೌರಮ್ಮ, ಜೆಎಂಎಸ್, ಶೋಭಾ ರಾಜ್ಯ ಕಾರ್ಯದರ್ಶಿ ಎಐಎಂ ಎಸ್.ಎಸ್, ವಿಮಲ, ಅಖಿಲ ವಿದ್ಯಾಸಂದ್ರ, ಸವಿತಾ, ಸುಶೀಲಾ ಸಮತಾ ವೇದಿಕೆ, ಮೈಸೂರು. ಸಬಿಹಾ ಭೂಮಿಗೌಡ, ಸುಶೀಲ, ರೂಪ ಹಾಸನ, ಮಮತಾ ಶಿವು, ಸೌಮ್ಯ, ಧರ್ಮೇಶ್, ಅರವಿಂದ, (ಸಿಐಟಿಯು) ಸಂದೇಶ್ ದಸಂಸ, ವಿಜಯ್ ಕುಮಾರ್ ಮಾದಿಗ ದಂಡೋರ, ಮುಬಶೀರ್ ಅಹಮದ್, ಸಿಐಟಿಯು ಪುಷ್ಪ, ಜಯಂತಿ, ಸಾಹಿತಿ ಸುವರ್ಣ, ಕಲಾವಿದ ಶಿವಪ್ರಸಾದ್, ಡಿವೈಎಫ್‌ಐ ಪೃಥ್ವಿ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್, ಅಬ್ದುಲ್ ಸಮದ್, ದಸಂಸ ಎಸ್.ಎನ್. ಮಲ್ಲಪ್ಪ, ಕೃಷ್ಣ ದಾಸ್, ಎಂ.ಸಿ. ಡೋಂಗ್ರೆ, ಧರ್ಮರಾಜ್ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed