ಅರೇಹಳ್ಳಿ: ಪಟ್ಟಣದಿಂದ ಬೇಲೂರಿಗೆ ಹಾಗು 73ರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ತೋಳಲು ರಸ್ತೆಯು ಕಳೆದ ಏಳೆಂಟು ವರ್ಷಗಳಿಂದ ತೀವ್ರ ಹದಗೆಟ್ಟಿದ್ದು ಉದ್ದಗಲಕ್ಕೂ ಗುಂಡಿ ಬಿದ್ದು ನೂರಾರು ಶಾಲಾ ಮಕ್ಕಳ,ರೈತರ,ಗ್ರಾಮಸ್ಥರ ಹಾಗು ಸಾರ್ವಜನಿಕ ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದಿದೆ.
ಈ ತಕ್ಷಣವೇ ಸಂಬಂಧಪಟ್ಟ ಜನಪ್ರತಿನಿಧಿಗಳು ಸರ್ಕಾರದ ಗಮನ ತಂದು ಸರಿಪಡಿಸಬೇಕು ಇಲ್ಲದಿದ್ದರೆ ಗುಂಡಿ ಬಿದ್ದ ಉದ್ದಗಲಕ್ಕೂ ಗಿಡ ನೆಟ್ಟು ಪೋಷಿಸಿ ಎಂದು ಆ ಭಾಗದ ಗ್ರಾಮಸ್ಥರು ,ಸಾರ್ವಜನಿಕರು,ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಅರೇಹಳ್ಳಿಯು ಹೋಬಳಿ ಕೇಂದ್ರವಾಗಿರುವುದರಿಂದ ದಿನನಿತ್ಯ ನಾಡಕಚೇರಿ,ಕೃಷಿ ಇಲಾಖೆ,ಬ್ಯಾಂಕ್ , ಶಾಲಾ ಕಾಲೇಜು ಹಾಗು ಇನ್ನಿತರ ಸರಕಾರಿ ಸೇವೆ ಪಡೆದುಕೊಳ್ಳಲು ಆಗಮಿಸುವ ತೋಳಲು, ಸಿದ್ದರಹಳ್ಳಿ ,ಆನುಘಟ್ಟ, ಹಸಿಡೆ,ನಾಗೇನಹಳ್ಳಿ,ಮತ್ತಿಹಳ್ಳಿ, ಕಣಗುಪ್ಪೆ ಹಾಗು ಇತರೆ ಗ್ರಾಮದ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಇಂತಹ ಹದಗೆಟ್ಟ ರಸ್ತೆಯ ಸಂಚಾರ ಅಪಾಯಕಾರಿಯಾಗಿದೆ
ಅದಲ್ಲದೆ ಕಡೂರು,ಚಿಕ್ಕಮಗಳೂರು, ಹುಬ್ಬಳ್ಳಿ ಧಾರವಾಡ ಹಾಗೂ ಇತರೆ ದೂರದ ಊರುಗಳಿಂದ ಸುಬ್ರಮಣ್ಯ ಧರ್ಮಸ್ಥಳಕ್ಕೆ ತೆರಳುವ ಹಲವಾರು ಪ್ರಯಾಣಿಕರು ಜಿಪಿಎಸ್ ನಕ್ಷೆಯ ಪ್ರಕಾರ ಈ ರಸ್ತೆಯನ್ನೇ ಬಳಸಿಕೊಂಡು ಹೋಗುವುದರಿಂದ ರಸ್ತೆ ದುರಸ್ತಿ ಆದರೆ ಅವರಿಗೂ ಅನುಕೂಲವಾಗುತ್ತದೆ.
ಇಂತಹ ರಸ್ತೆಗಳಿಂದ ವಾಹನಗಳು ಹಾನಿಯಾಗುವುದಲ್ಲದೆ ಸಂಚರಿಸುವ ಸವಾರರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ತ್ವರಿತವಾಗಿ ಸುಸರ್ಜಿತ ನೂತನ ರಸ್ತೆ ನಿರ್ಮಿಸಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಿತ್ತಾವರ ಗುಡ್ಡದ ಹೋರಾಟ ಸಮಿತಿಯ ಅಧ್ಯಕ್ಷ ಕುಮಾರ್ ಕೆ ಎಂ ತಿಳಿಸಿದರು
ಈ ವೇಳೆ ನದೀಮ್, ಸಂತೋಷ್, ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು