ವಯನಾಡಿನ ಮಹಾ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬಗಳ ಪರಿಸ್ಥಿತಿ ನಿಜಕ್ಕೂ ಕರುಣಾಜನಕವಾಗಿದೆ. ವಯನಾಡಿನ ಮಣ್ಣಲ್ಲಿ ಮೃತದೇಹಗಳ ರಾಶಿಯ ದೃಶ್ಯ ನಿಜಕ್ಕೂ ದುರಂತ ಭೀಕರತೆಗೆ ಸಾಕ್ಷಿ ಹೇಳ್ತಿದೆ. ಈ ಮಧ್ಯೆ ಕಾಳಜಿ ಕೇಂದ್ರಲ್ಲಿರುವವರ ಕತೆಗಳು ಕರುಳು ಹಿಂಡುತಿವೆ.
ಪ್ರಕೃತಿ ಮುನಿದ್ರೆ ಮನುಷ್ಯನ ಜೀವನ ಗತಿಯೇ ಬದಲಾಗಿ ಹೋಗುತ್ತೆ. ಜೀವನದ ಹಾದಿಯೇ ದಿಕ್ಕು ತಪ್ಪಿ ಹೋಗುತ್ತೆ. ವಯನಾಡಿನ ಜಲ ಪ್ರಳಯದಲ್ಲಿ ಸಿಲುಕಿ ಬಂದವರದ್ದು ಈಗ ಇದೇ ಪರಿಸ್ಥಿತಿಯಾಗಿದೆ. ಐಷಾರಾಮಿ ಜೀವನ. ಕಾರು ಬೈಕ್ ಅಂತೆಲ್ಲ ಇದ್ದವರು ಪ್ರಕೃತಿ ಕೋಪಕ್ಕೆ ಅಕ್ಷರಶಃ ಬೀದಿಪಾಲಾಗಿದ್ದಾರೆ.
ಮೆಪ್ಪಾಡಿಯ ಸ್ಮಶಾನದಲ್ಲಿ ಸಾಲು ಸಾಲು ಅಂತ್ಯಸಂಸ್ಕಾರ
ಕೇರಳದ ಮೆಪ್ಪಾಡಿಯ ಚರ್ಚ್‌ನಲ್ಲಿ ಶವಗಳ ಮುಂದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ. ಶವಸಂಸ್ಕಾರಕ್ಕೂ ಮುನ್ನ ಪಾದ್ರಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಗುಡ್ಡ ಕುಸಿತದಲ್ಲಿ ಮೃತರಾದ 3 ಮೃತದೇಹಗಳ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.
ಇನ್ನು ಗುರುತು ಸಿಗದ 26 ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ. ಮೆಪ್ಪಾಡಿ ಸರ್ಕಾರಿ ಜಾಗದಲ್ಲಿ ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ಮಾಡಲಾಗಿದ್ದು, ಗ್ಯಾಸ್ ಬರ್ನರ್, ಸೌದೆಗಳನ್ನ ಬಳಸಿಕೊಂಡು ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ.
ಅಂತ್ಯಕ್ರಿಯೆಯನ್ನ ನಡೆಸಿ ಕುಟುಂಬಸ್ಥರಿಗೆ ಚಿತಾ ಭಸ್ಮ ಹಸ್ತಾಂತರ ಮಾಡಲಾಗಿದೆ.