ಅರೇಹಳ್ಳಿ: ದೊಡ್ಡ ಮಟ್ಟದ ಕಾರ‍್ಯಕ್ರಮವನ್ನು ಏರ್ಪಡಿಸಲು ಸಾಧ್ಯವಾಗದ ಗ್ರಾಮೀಣ ಭಾಗದ ಶಾಲೆಯಲ್ಲಿ ಇಂದು ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವುದು ಬಹಳ ಸಂತಸ ತಂದಿದೆ ಕೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಕೆಸಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ಶಾಲಾ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬಿಕ್ಕೋಡು ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಂಪನ್ಮೂಲವನ್ನು ಕ್ರೋಢಿಕರಿಸಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ಸುಲಭದ ಮಾತಲ್ಲ.
ಮನಸ್ಸಿದ್ದರೆ ಮಾರ್ಗವೆಂಬಂತೆ ಇದೇ ಶಾಲೆಯಲ್ಲಿ ಕ್ರೀಡಾಕೂಟವನ್ನು ಮಾಡಿಯೇ ತೀರುತ್ತೇನೆ ಎಂದು ಪಣತೊಟ್ಟ ಮುಖ್ಯ ಶಿಕ್ಷಕರ ಅತೀವ ಆಸಕ್ತಿಯಿಂದ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದರಿಂದ ಸಹಸ್ರಾರು ಸಂಖ್ಯೆಯ ಗ್ರಾಮೀಣ ಭಾಗದ ಜನರು ಖುಷಿಯಿಂದ ಆಟೋಟ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.
ತುಂತುರು ಮಳೆ, ಕಾಡಾನೆಗಳ ಸಮಸ್ಯೆ ನಡುವೆ ವಿವಿಧ ಶಾಲೆಗಳ ಮಕ್ಕಳು,ಶಿಕ್ಷಕರು ಹಾಗೂ ವಿದ್ಯಾರ್ಥಿ ಪೋಷಕರು ಭಾಗವಹಿಸುವುದರ ಮೂಲಕ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ವೇಳೆ ಇಸಿಒ ಶಿವಪ್ಪ, ಶಾಲಾ ಮುಖ್ಯ ಶಿಕ್ಷಕ ಸಂಪತ್ ಟಿ.ಸಿ, ಸಿಆರ್‌ಪಿಗಳಾದ ರಾಮಯ್ಯ ಹಾಗೂ ನರಸಿಂಹ ಮೂರ್ತಿ, ಸಾಹಿತಿ ಕುಮಾರ ಸ್ವಾಮಿ, ಗ್ರಾಪಂ ಉಪಾಧ್ಯಕ್ಷೆ ತೇಜಸ್ವಿ ಸತೀಶ್, ಕರ‍್ಯದರ್ಶಿ ಶಾಹೀನ್,ವಿವಿಧ ಶಾಲೆಯ ಶಿಕ್ಷಕರು,ಕ್ರೀಡಾಪಟುಗಳು ಭಾಗವಹಿಸಿದ್ದರು.