ಅರೇಹಳ್ಳಿ: ಕಳೆದ ೧೨ ದಿನಗಳ ಹಿಂದೆ ಬೇಲೂರು ತಾಲೂಕಿನ ಅರೇಹಳ್ಳಿಯ ಶ್ರೀ ವಿನಾಯಕ ಭವನದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನ ಜರುಗುತ್ತಿದ್ದ ವೈವಿಧ್ಯಮಯ ಕಾರ‍್ಯಕ್ರಮಗಳಿಗೆ ಗಣೇಶನ ವಿಸರ್ಜನೋತ್ಸವದೊಂದಿಗೆ ಅಧಿಕೃತ ತೆರೆ ಬಿದ್ದಿದೆ.

ಬುಧವಾರ ಬೆಳಗ್ಗೆ ಗಣಪತಿ ಮೂರ್ತಿಯನ್ನು ಭವ್ಯ ಪುಷ್ಪವಾಹನದಲ್ಲಿ ಬಿಜಯ ಮಾಡಿಸಿ ರೋಡ್ ಡಿಜೆ ಹಾಗೂ ನಾಸಿಕ್ ಡೋಲ್‌ನ ಸದ್ದಿಗೆ ಮಹಿಳೆಯರು,ಪುರುಷರು,ಮಕ್ಕಳು ಕುಣಿದು ಕುಪ್ಪಳಿಸಿದರು.

ಯೂತ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಮುಸ್ತಫಾರವರು ಹಿಂದೂ ಬಾಂಧವರಿಗೆ ಮಜ್ಜಿಗೆ ವಿತರಿಸುವುದರ ಮೂಲಕ ಹಿಂದೂ-ಮುಸ್ಲೀಂ ಧರ್ಮ ಸಮನ್ವಯತೆ ಸಾರಿದರು.

ಪಟ್ಟಣದ ಮುಖ್ಯ ರಸ್ತೆ, ಮಲಸಾವರ ರಸ್ತೆ,ಹೊಸಪೇಟೆ ಬೀದಿ, ಸಕಲೇಶಪುರ ರಸ್ತೆ,ಕೇಶವನಗರ, ದೇವಸ್ಥಾನ ಬೀದಿಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅರೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಅಡಗಂಚನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಅಂದಾಜು ೨ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅರೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಜಮಾವಣೆಗೊಂಡು ವಿಸರ್ಜನಾ ಕಾರ್ಯಕ್ರಮವನ್ನು ವೀಕ್ಷಿಸಿದರು.

ಬಿಗಿ ಪೊಲೀಸ್ ಭದ್ರತೆ: ಕಳೆದ ಕೆಲ ವರ್ಷಗಳಿಂದ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದು ಉತ್ಸವ ಸಮಿತಿ ಹಾಗೂ ಪೊಲೀಸ್ ಭದ್ರತೆಯ ಮೇಲೆ ಪ್ರಶ್ನೆ ಮಾಡುವಂತಿದ್ದ ಸನ್ನಿವೇಶಗಳು ಈ ಬಾರಿ ಪುನರಾವರ್ತನೆಯಾಗದೇ ಶಾಂತಿಯುತವಾಗಿ ಜರುಗಿತು.

ಮುಂಜಾಗೃತ ಕ್ರಮವಾಗಿ ಪಟ್ಟಣ ವ್ಯಾಪ್ತಿಯಲ್ಲಿನ ೨ ಅಧಿಕೃತ ಬಾರ್‌ಗಳು ಬಾಗಿಲು ಮುಚ್ಚಿದ್ದವು. ಪೊಲೀಸ್ ಇಲಾಖೆ ವತಿಯಿಂದ ೨ ಡಿಆರ್ ತುಕಡಿಗಳು ಸೇರಿ ೪೦ ಪೊಲೀಸ್ ಸಿಬ್ಬಂದಿ, ೩೬ ಗೃಹರಕ್ಷಕ ಸಿಬ್ಬಂದಿಗಳನ್ನು ಸೂಕ್ತ ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಅರಸೀಕೆರೆ ವಿಭಾಗದ ಡಿವೈಎಸ್‌ಪಿ ಜೆ.ಲೋಕೇಶ್, ಬೇಲೂರು-ಹಳೇಬೀಡು ವೃತ್ತ ನಿರೀಕ್ಷಕ ವಿನಯ್, ಅರೇಹಳ್ಳಿ ಪಿಎಸ್ಸೈ ಶೋಭಾ ಭರಮಣ್ಣನವರ್, ಬೇಲೂರು ಪೊಲೀಸ್ ಠಾಣಾ ಪಿಎಸ್ಸೈ ಜಯಪ್ರಕಾಶ್, ಬಾಣಾವರ ಪಿಎಸ್ಸೈಸುರೇಶ್ ಸಿ.ಎಸ್, ಹಳೇಬೀಡು ಪಿಎಸ್ಸೈಸಿದ್ದಲಿಂಗ ಸೇರಿದಂತೆ ನಾನಾ ಅಧಿಕಾರಿಗಳು ವಿಸರ್ಜನ ಮಹೋತ್ಸವ ಮುಗಿಯುವವರೆಗೆ ಸ್ಥಳದಲ್ಲೆ ಮೊಕ್ಕಾಂ ಹೂಡಿ ಸೂಕ್ತ ಭದ್ರತೆ ಒದಗಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *