ಸುತ್ತೂರು : ಕಪಿಲಾ ನದೀತೀರದಲ್ಲಿರುವ ಸುತ್ತೂರು ಶ್ರೀಕ್ಷೇತ್ರವನ್ನು ಪರಮ ತಪಸ್ಸಿದ್ಧಿಯಿಂದ ಜಾಗೃತ ಧರ್ಮಕ್ಷೇತ್ರವನ್ನಾಗಿ ನೆಲೆಗೊಳಿಸಿದ ಮಹಾಮಹಿಮರು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು, ಪೂಜ್ಯರು ಸಂಸ್ಥಾಪಿಸಿದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ಸಹಸ್ರಾರು ವರ್ಷಗಳಿಂದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜ್ಞಾನಾನ್ನದಾಸೋಹಗಳ ಕೈಂಕರ್ಯವನ್ನು ನಡೆಸುತ್ತಾ ಬಂದಿದೆ.
ಇಂಥ ಭವ್ಯ ಇತಿಹಾಸವುಳ್ಳ ಶ್ರೀಮಠದ ಎಲ್ಲ ಪೂಜ್ಯ ಜಗದ್ಗುರುಗಳು ಅನುಪಮ ತಪೋನುಷ್ಠಾನದಿಂದ ಲೋಕೋದ್ಧಾರದ ಸೇವಾಕಾರ್ಯಗಳನ್ನು ಕೈಗೊಂಡಿದ್ದಾರೆ.
ಶ್ರೀಮಠದ ಬಹುಮುಖ ಚಟುವಟಿಕೆಗಳ ನಿರ್ವಹಣೆಗಾಗಿ ಶ್ರೀಮನ್ನಹಾರಾಜ ರಾಜಗುರುತಿಲಕ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಅದರ ಅಂಗಸಂಸ್ಥೆಗಳ ಮೂಲಕ ದೇಶವಿದೇಶಗಳಲ್ಲಿ ಧರ್ಮ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾಕಾರ್ಯಗಳು ನಡೆಯುತ್ತಿವೆ.
ಆದಿ ಜಗದ್ಗುರುಗಳವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭಗೊಂಡು ಮಾಘ ಶುದ್ಧ ಬಿದಿಗೆಯವರೆಗೆ ಆರು ದಿನಗಳ ಕಾಲ ನೆರವೇರುತ್ತದೆ. ಮಾಸಶಿವರಾತ್ರಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ಪಾಡ್ಯಮಿಯಂದು ತೆಪ್ಪೋತ್ಸವ ಜರುಗುತ್ತವೆ.
ಈ ಸಂಭ್ರಮದ ಜಾತ್ರೆಯಲ್ಲಿ ಜನತೆಯ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಹಲವಾರು ರೀತಿಯ ವೈವಿಧ್ಯಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ.
ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಮತ್ತು ಪೂಜಾಕೈಂಕರ್ಯಗಳು ಸೇವಾರ್ಥದಾರರು, ಭಕ್ತಾದಿಗಳು, ಸಂಘಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಾಯ, ಸಹಕಾರಗಳಿಂದ ನಡೆಯುತ್ತವೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಭಾಗವಹಿಸಿ ಯಶಸ್ವಿಗೊಳಿಸಿ : ಸುತ್ತೂರು ಶ್ರೀಕ್ಷೇತ್ರ