
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿಯ ಹಳೆ ರಸ್ತೆಗಳಿಗೆ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು ಶಾಸಕ ಸಿಮೆಂಟ್ ಮಂಜು ಪರಿಶೀಲನೆ ನೆಡೆಸಿದರು.
ತಾಲೂಕಿನ ಬಾಳ್ಳುಪೇಟೆಯಲ್ಲಿ ರಸ್ತೆ ಕಾಮಗಾರಿ ವೀಕ್ಷಿಸಿ ಬಳಿಕ ಮಾತನಾಡಿದ ಅವರು,ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು ಯಾವುದೇ ಲೋಪವಾಗದ ರೀತಿ ಕಾಮಗಾರಿ ಪೂರ್ಣಗೊಳಿಸಬೇಕು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿಸಿದರು.
ಬೈಪಾಸ್ ರಸ್ತೆ ಆರಂಭವಾಗುವ ಕೊಲ್ಲಹಳ್ಳಿಯಿಂದ ಬಾಳೆಗದ್ದೆ, ತೇಜಸ್ವಿ ವೃತ್ತ,ಹಳೇ ಹೇಮಾವತಿ ಸೇತುವೆ, ಹಳೇ ಬಸ್ ನಿಲ್ದಾಣ, ಚಂಪಕನಗರ ಮಾರ್ಗವಾಗಿ ಮಂಗಳೂರು ಕಡೆಯಿಂದ ಬೈಪಾಸ್ ಪ್ರವೇಶ ಮಾಡುವ ಆನೆಮಹಲ್ ಸಮೀಪದವರೆಗೆ, ಬಾಳ್ಳುಪೇಟೆ ಹಾಗೂ ಪಾಳ್ಯ ಒಳ ರಸ್ತೆಗಳು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 75ರ ವ್ಯಾಪ್ತಿಯಲ್ಲಿದ್ದು ಮೂರು ಕಡೆ ಬೈಪಾಸ್ ರಸ್ತೆ ನಿರ್ಮಾಣವಾಗಿದ್ದರಿಂದ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿತ್ತು. ಅದರಲ್ಲೂ ಪಟ್ಟಣದ ಹೇಮಾವತಿ ಸೇತುವೆ ಮೇಲಿನ ರಸ್ತೆ ಸಹ ಗುಂಡಿಮಯವಾಗಿದ್ದು ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗಿತ್ತು.
ಈ ಹಿನ್ನಲೆಯಲ್ಲಿ ಕಳೆದ ಅಕ್ಟೋಬರ್ ನಲ್ಲಿ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಹಳೇ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಪಡಿಸಲು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ಸಚಿವರು ಇದೀಗ ರೂ 10.6 ಕೋಟಿ ಹಣ ಬಿಡುಗಡೆ ಮಾಡಿದ್ದು ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಕಾಮಗಾರಿ ಮುಗಿಸುವ ಸಲುವಾಗಿ ತ್ವರಿತವಾಗಿ ರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ ಎಂದರು.
ಬಾಳ್ಳುಪೇಟೆ ಹಳೆ ರಸ್ತೆ ಹಲವಾರು ವರ್ಷಗಳಿಂದ ಡಾಂಬರ್ ಕಾಣದೆ ಗುಂಡಿಮಯವಾಗಿ ವಾಹನ ಸವಾರರು ನರಕಯಾತನೆ ಪಡುತ್ತಿದ್ದರು ಹಾಗಾಗಿ ಈ ಭಾಗದ ಜನರು ರಸ್ತೆ ದುರಸ್ತಿಪಡಿಸುವಂತೆ ಮನವಿ ಸಲ್ಲಿಸಿದ್ದರು.
ಇದೆ ವೇಳೆ ಶಾಸಕರು ಸ್ವತಃ ತಾವೇ ಅಳತೆ ಟೇಪ್ ಹಿಡಿದು ಹಾಗೂ ರಸ್ತೆಗೆ ಹಾಕುತ್ತಿರುವ ಡಾಂಬರಿನ ಪ್ರಮಾಣ, ಕಚ್ಚಾ ವಸ್ತುಗಳ ಗುಣ ಪರಿಶೀಲನೆ ನೆಡೆಸಿ ಅಳತೆಯ ಮಾಪನದಿಂದ ರಸ್ತೆಗೆ ಹಾಕುತ್ತಿರುವ ಡಾಂಬರಿನ ಅಳದ ಪರಿಶೀಲನೆ ನೆಡೆಸಿದರು.


