ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ನಾಳೆ (ಶುಕ್ರವಾರ) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ನೂರಾರು ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು, ನಾಳೆ ರಾಜ್ಯದ ಬಹುತೇಕ ಹಾಸನ ಜಿಲ್ಲೆಯೂ ಸೇರಿದಂತೆ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ.
ಬಂದ್ ಯಶಸ್ವಿ ಮಾಡಲು ಕನ್ನಡಪರ ಹಾಗೂ ರೈತ ಪರ ಸಂಘಟನೆಗಳಿಂದ ಭಾರೀ ತಯಾರಿ ನಡೆದಿದೆ.ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯಲು ಹೋರಾಟಗಾರರು ಪ್ಲಾನ್ ಮಾಡಿದ್ದಾರೆ. ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲೇ ಪ್ರತಿಭಟನೆ ನಡೆಸುವುದಕ್ಕೆ ಕನ್ನಡ ಸಂಘಟನೆಗಳ ತಯಾರಿ ನಡೆಸುತ್ತಿವೆ. ನಗರಗಳ ವ್ಯಾಪ್ತಿ ಮಾತ್ರವಲ್ಲದೆ, ತಾಲೂಕು ಕೇಂದ್ರಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲೂ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ಇಡೀ ರಾಜ್ಯಕ್ಕೆ ಕನ್ನಡಪರ ಸಂಘಟನೆಗಳು ಸಂದೇಶ ಕೊಟ್ಟಿವೆ. ಕಳೆದ ಮಂಗಳವಾರವಷ್ಟೇ ಬೆಂಗಳೂರು ಬಂದ್ ಮಾಡಲಾಯಿತು. ಇದೀಗ ಅಖಂಡ ಕರ್ನಾಟಕ ಬಂದ್ ಗೆ ಸಕಲತಯಾರಿ ನಡೆಯುತ್ತಿದೆ.
ಶುಕ್ರವಾರ ಕರ್ನಾಟಕ ಬಂದ್‌ಗೆ ಇಂದು ಸಹ ಅಬ್ಬರದ ಪ್ರಚಾರ ನಡೆಯುತ್ತಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್‌ಗೆ ಬೆಂಬಲ ನೀಡುವಂತೆ ವಿವಿಧ ಸಂಘಟನೆಗಳು ಮನವಿ ಮಾಡುತ್ತಿವೆ. ನಗರ ಹಲವು ಕಡೆ ತೆರದ ವಾಹನದ ಮುಖಾಂತರ ವಾಟಳ್ ನಾಗರಾಜ್ ಮನವಿ ಮಾಡುತ್ತಿದ್ದಾರೆ. ನಿನ್ನೆ ಮಾಲ್, ಮಾರುಕಟ್ಟೆ ಸೇರಿ ಹಲವು ಕಡೆ ಹೋಗಿ ಪ್ರಚಾರ ಮಾಡಿದರು.
ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್ ಗೆ ಕರೆ ಕೊಡುತ್ತಿದ್ದರೆ. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ನಾಳಿನ ಕರ್ನಾಟಕ ಬಂದ್ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ: ನಾಳೆ ಬೆಂಗಳೂರು, ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆ: ಯಾವ ಸೌಲಭ್ಯ ಇರಲಿದೆ, ಏನಿರಲ್ಲ- ಮಾಹಿತಿ ಇಲ್ಲಿದೆ…ಜನಜೀವನ ಅಸ್ತವ್ಯಸ್ತ ಸಾಧ್ಯತೆ: ಕರ್ನಾಟಕ ಬಂದ್‌ನಿಂದ ವಿಶೇಷವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ನಗರದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಎಲ್ಲ ವರ್ಗದ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.ಬಂದ್ ಇಡೀ ಕರ್ನಾಟಕಕ್ಕೆ ಮತ್ತು ಹೆದ್ದಾರಿಗಳು, ಟೋಲ್ ಗೇಟ್‌ಗಳು, ರೈಲು ಸೇವೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಮುಚ್ಚಲು ಪ್ರಯತ್ನಿಸುತ್ತೇವೆ ಎಂದು ಹೇಳಲಾಗಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಹ ಬಂದ್‌ಗೆ ಬೆಂಬಲ ನೀಡಿದ್ದು, ಕರ್ನಾಟಕದ ಹೋಟೆಲ್‌ಗಳು, ಆಟೋರಿಕ್ಷಾಗಳು ಬಂದ್‌ಗೆ ಬೆಂಬಲ ನೀಡಿವೆ.ಆಟೋರಿಕ್ಷಾ ಚಾಲಕರ ಒಕ್ಕೂಟ ಮತ್ತು ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘ (OUDOA) ಬಂದ್‌ಗೆ ಬೆಂಬಲ ನೀಡುತ್ತಿದೆ.
ನಾವು ನಾಳೆ ನಾಯಂಡಹಳ್ಳಿಯಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ನಡೆಸುತ್ತೇವೆ” ಎಂದು ಅದರ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿದೆ. ಶುಕ್ರವಾರ ಇಡೀ ದಿನ ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳನ್ನು ಮುಚ್ಚಬೇಕೆ ಎಂಬುದರ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅವರು ಸಭೆ ನಡೆಸುತ್ತಿದ್ದರು.
ರಾಜ್ಯ ಸಾರಿಗೆ ಇಲಾಖೆಯು ತಮ್ಮ ಸೇವೆಗಳನ್ನು ಎಂದಿನಂತೆ ಮುಂದುವರಿಸಲು ರಾಜ್ಯ ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡಿದೆ. ಕರ್ನಾಟಕದ ಉತ್ತರ ಭಾಗದ ಬಳ್ಳಾರಿ, ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ದಾವಣಗೆರೆಯ ರೈತರು ಮತ್ತು ವರ್ತಕರು ಬಂದ್‌ಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಆದರೆ ಬಂದ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡಲು ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಬ್ದಾರಿಯನ್ನು ಆಯಾ ಆಡಳಿತ ಮಂಡಳಿ ತಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಶಾಲೆಗಳ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಮನವಿ ನೀಡಲಾಗಿದೆ ಎಂದು ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.
ಕಾವೇರಿ ವಿಚಾರವಾಗಿ ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಬಂದ್ ಬೆಂಬಲಿಸಿ ನಾಳೆ ಹೆದ್ದಾರಿ, ರೈಲು ತಡೆದು ಚಳವಳಿ ನಡೆಸಲಾಗುವುದು ಎಂದು ಮಂಡ್ಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹಾಗೂ ರೈಲು ತಡೆಗೆ ನಿರ್ಧಾರ ಮಾಡಲಾಗಿದೆ.ನಾಳೆ ಬೆಂಗಳೂರು ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಮೆಟ್ರೋ ರೈಲು ಸುರಕ್ಷತಾ ವಿಭಾಗದ ಆಯುಕ್ತರು ಕೆಂಗೇರಿಯಿಂದ ಚಲ್ಲಘಟ್ಟ ನಡುವೆ ಹೊಸ ಮಾರ್ಗ ಪರಿಶೀಲನೆ ನಡೆಸಲಿದ್ದು, ಈ ಹಿನ್ನಲೆ ನಾಳೆ ಕೆಂಗೇರಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸಂಚಾರವಿಲ್ಲ. ಆದರೆ, ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸೇವೆ ಲಭ್ಯವಿರಲಿದೆ.