ಚೈನಾದಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಟೆನ್ನಿಸ್ ಮಿಶ್ರ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್ ಭೋಪಣ್ಣ ಮತ್ತು ರುತುಜಾ ಬೋಸಲೆ ಜೋಡಿ ಚಿನ್ನದ ಪದಕಕ್ಕೆ ಮುತ್ತಿಟ್ಟುಕೊಂಡಿದೆ.
ಹ್ಯಾಂಗ್‌ಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತೀಯ ಜೋಡಿಯು 2-6, 6-3, 10-4 ಅಂಕಗಳೊಂದಿಗೆ ತೈವಾನ್ ಜೋಡಿಯಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ಅವರನ್ನು ಸೋಲಿಸಿದೆ.ಮೊದಲ ಸೆಟ್‌ನ್ನು 2-6 ರಲ್ಲಿ ಕಳೆದುಕೊಂಡ ನಂತರ ಭಾರತ ತಂಡವು ಪ್ರಭಾವಶಾಲಿ ಪುನರಾಗಮನವನ್ನು ಪಡೆದುಕೊಂಡಿತು.
1 ಗಂಟೆ 14 ನಿಮಿಷಗಳ ರೋಚಕ ಸ್ಪರ್ಧೆಯಲ್ಲಿ ಭಾರತದ ಜೋಡಿ ಟೈ ಬ್ರೇಕರ್‌ನಲ್ಲಿ ಪ್ರಾಬಲ್ಯ ಮೆರೆದರು. ಅಂತಿಮವಾಗಿ 10-4ರಲ್ಲಿ ಗೆದ್ದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಜೋಡಿಯು ಚೈನೀಸ್ ತೈಪೆ ಜೋಡಿಯಾದ ಜೇಸನ್ ಜಂಗ್ ಮತ್ತು ಯು-ಹಸಿಯು ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರಿಂದ ಇದು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಟೆನಿಸ್ ಪದಕವಾಗಿದೆ.
ಏಷ್ಯನ್ ಗೇಮ್ಸ್‌ನ ಮಿಶ್ರ ಡಬಲ್ಸ್‌ನಲ್ಲಿ ಭಾರತ ಪಡೆದ ಮೂರನೇ ಚಿನ್ನದ ಪದಕ ಇದಾಗಿದೆ. ಹಿಂದೆ ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಅವರ ಜೋಡಿ ದೋಹಾದಲ್ಲಿ 2006ರಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಇದಲ್ಲದೆ ಸಾನಿಯಾ ಮಿರ್ಜಾ-ಸಾಕೇತ್ ಮೈನೆನಿ ಜೋಡಿ 2014 ರಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದರು.