ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು,ಕೃಷಿ ಮಹಾವಿದ್ಯಾಲಯ ಕಾರೇಕೆರೆ,ಹಾಸನ, ಇವರು ಸಿಸಿಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್(CCS NIAM) ರವರ ಸಹಯೋಗದೊಂದಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023- 24ರ ಅಂಗವಾಗಿ ಚಿಕ್ಕಯರಗನಾಳು ಗ್ರಾಮದಲ್ಲಿ ಜೇನು ಕೃಷಿ-ಗ್ರಾಮೀಣ ರೈತರಿಗೆ ಸಹ ಉದ್ಯೋಗ ಎಂಬ ಹೆಸರಿನಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ 18/12/2023 ರಿಂದ 20/12/2023ರವರೆಗು ಆಯೋಜಿಸಿದ್ದರು.
ಈ ಶಿಬಿರಕ್ಕೆ ದೊಡ್ಡಯರಗನಾಳು, ಚಿಕ್ಕಯರಗನಾಳು ಗ್ರಾಮದಿಂದ 30 ಆಸಕ್ತಿಯುಳ್ಳ ರೈತರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಚಿಕ್ಕಯರಗನಾಳು ಗ್ರಾಮದ ಸಮುದಾಯ ಭವನದಲ್ಲಿ ಡಾ.ಎಸ್.ಎನ್.ವಾಸುದೇವನ್, ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ ಹಾಸನ, ಇವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ರೈತರಿಗೆ ವಿವಿಧ ಜಾತಿಯ ಜೇನುಗಳಾದ ಹೆಜ್ಜೇನು, ತುಡುವೆ ಜೇನು, ನುಸುರು ಜೇನು, ಕೋಲು ಜೇನು, ಯುರೋಪಿಯನ್ ಜೇನು ಮತ್ತು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಂದುವರೆದು ವರ್ಷದ ವಿವಿಧ ಕಾಲಗಳಲ್ಲಿ ಜೇನುಗಳ ನಿರ್ವಹಣೆ ಬಗ್ಗೆಯೂ ಮಾಹಿತಿಯನ್ನು ನೀಡಲಾಯಿತು. ಇದರೊಂದಿಗೆ ಜೇನು ಕುಟುಂಬಕ್ಕೆ ಬರಬಹುದಾದ ರೋಗ ಮತ್ತು ಕೀಟ ಭಾದೆ ಬಗ್ಗೆ ವಿವರಿಸಿ, ಅವುಗಳ ನಿರ್ವಹಣೆ ಮಾಡುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು.
ಜೇನು ಕೃಷಿಯನ್ನು ಕಸುಬಾಗಿ ಮಾಡಿಕೊಂಡರೆ ಅದಕ್ಕೆ ತಗಲುವ ಖರ್ಚು, ಪಡೆಯಬಹುದಾದ ಲಾಭ ಹಾಗೂ ತೋಟಗಾರಿಕಾ ಇಲಾಖೆಯಿಂದ ಸಿಗಬಹುದಾದ ಅನುಕೂಲಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಮುಂದುವರೆದು ಜೇನು ಕೃಷಿಯಿಂದ ಪಡೆಯಬಹುದಾದ ಅನೇಕ ಉತ್ಪನ್ನಗಳಾದ ಜೇನುತುಪ್ಪ, ಜೇನಿನ ಮೇಣ, ಜೇನಿನ ಅಂಟು, ಪರಾಗ, ರಾಜಶಾಹಿರಸ ಮುಂತಾದವುಗಳ ಬಗ್ಗೆ ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಬೀ ಥೆರಪಿ(ಜೇನಿನಿಂದ ಕೀಲು ನೋವಿಗೆ ಪಡೆಯುವ ಚಿಕಿತ್ಸೆ) ಕೂಡ ಪ್ರಸಿದ್ಧಿಯನ್ನು ಪಡೆದು ಜೇನು ಕೃಷಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೆಲ್ಲದರ ಹೊರತು ಜೇನಿನಿಂದ ಕೃಷಿಗೆ ಸಿಗುವ ಪ್ರಮುಖ ಲಾಭವೆಂದರೆ ಪರಾಗ ಸ್ಪರ್ಶದಿಂದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗುತ್ತದೆ ಅದರಿಂದ ಹೆಚ್ಚು ಲಾಭಗಳಿಸಬಹುದು ಎಂದು ತಿಳಿಸಿದರು. ನೈಸರ್ಗಿಕ ಜೇನುಗೂಡನ್ನು ಜೇನು ಪೆಟ್ಟಿಗೆಗೆ ವರ್ಗಾಯಿಸುವ ವಿಧಾನವನ್ನು ರೈತರಿಗೆ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಜೇನು ಪೆಟ್ಟಿಗೆಯ ನಿರ್ವಹಣೆ ಮತ್ತು ಜೇನುತುಪ್ಪ ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿ ಕೊಡಲಾಯಿತು. ಉತ್ತಮ ಜೇನುತುಪ್ಪ ಹಾಗೂ ಕಲಬೆರಕೆ ಜೇನುತುಪ್ಪವನ್ನು ಮನೆಯಲ್ಲಿಯೇ ಸುಲಭವಾಗಿ ಗುರುತಿಸುವ ಮಾರ್ಗಗಳ ಬಗ್ಗೆ ವಿವರಿಸಿದರು.
ಒಟ್ಟಾರೆಯಾಗಿ ಈ ಮೂರು ದಿನದ ಕಾರ್ಯಕ್ರಮಕ್ಕೆ ವಿವಿಧ ವಿಷಯಗಳನ್ನು ವಿವರಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿಜಯಕುಮಾರ್.ಕೆ.ಟಿ. ಮತ್ತು ಮಿಸ್ಟರ್ ಸಂತೋಷ್, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು,ಡಾ.ಮುನಿಸ್ವಾಮಿಗೌಡ ಕೆ.ಎನ್, ಡಾ.ಬಿ.ಎಸ್ ಬಸವರಾಜು, ಡಾ.ಸುನಿತಾ.ಟಿ. ಆರ್, ಡಾ. ಹರ್ಷಿತ.ಎ.ಪಿ,ಡಾ. ಅರವಿಂದ್ ಕುಮಾರ್.ಎಂ.ಕೆ, ಡಾ. ರಾಘವೇಂದ್ರ.ಎಸ್, ಕೃಷಿ ಮಹಾವಿದ್ಯಾಲಯ,ಹಾಸನ ಇವರು ಭಾಗವಹಿಸಿದರು.
ಈ ಕಾರ್ಯಕ್ರಮದ ನಿರ್ದೇಶಕರಾದಂತಹ ಡಾ. ಶಶಿ ಕಿರಣ್.ಎ.ಎಸ್. ಒಟ್ಟಾರೆಯಾಗಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬರಲು ಸಹಕರಿಸಿದರು.
ಕಾರ್ಯಕ್ರಮದ ಕೊನೆಯ ದಿನ ಭಾಗವಹಿಸಿದ್ದ ಎಲ್ಲಾ 30 ರೈತರಿಗೆ ಪ್ರಮಾಣ ಪತ್ರದೊಂದಿಗೆ ಜೇನು ಗೂಡಿರುವ ತಲಾ ಒಂದು ಪೆಟ್ಟಿಗೆಯನ್ನು ವಿತರಿಸಲಾಯಿತು. ಕೃಷಿ ಮಹಾವಿದ್ಯಾಲಯ, ಹಾಸನದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ,ಚಿಕ್ಕಯರಗನಾಳು ಗ್ರಾಮದಲ್ಲಿರುವ ಅಂತಿಮ ವರ್ಷದ ಕೃಷಿ ಮತ್ತು ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಜೇನು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಸಂತಸ ವ್ಯಕ್ತಪಡಿಸಿದರು.