ಬೇಲೂರು. ಮೇ.೩೧”ಶಾಲಾ ಪ್ರಾರಂಭೋತ್ಸವ – ಕುದುರೆ ಏರಿ ಬಂದ ವಿದ್ಯಾರ್ಥಿನಿ” :- ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಬೇಲೂರು ತಾಲ್ಲೂಕಿನ ವಿವಿಧೆಡೆ ಅತ್ಯಂತ ಅದ್ದೂರಿ ಮತ್ತು ವಿಜೃಂಭಣೆಯಿಂದ ಆಚರಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕರು ಬರ ಮಾಡಿಕೊಂಡರು.
ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕುದುರೆ ಸವಾರಿ ಮೂಲಕ ಬರ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ತಾಲ್ಲೂಕಿನಲ್ಲಿ ಒಟ್ಟು ೩೫೯ ಹಿರಿಯ, ಪ್ರೌಢ ಶಾಲೆಗಳಿವೆ. ಒಟ್ಟು ೨೧ ಸಾವಿರಕ್ಕೂ ಹೆಚ್ಚು ಮಕ್ಕಳು ಅಧ್ಯಾಯ ಮಾಡುತ್ತಿದ್ದಾರೆ. ೨೦೨೪-೨೫ ಸಾಲಿನ ಇಂದಿನ ಶಾಲಾ ಪ್ರಾರಂಭೋತ್ಸವನ್ನು ಅತ್ಯಂತ ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ನಡೆಸಬೇಕು ಎಂಬ ಕಾರಣದಿಂದ ನಾವುಗಳು ಮೇ.೨೫ ರಂದು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕ ಸಭೆಯನ್ನು ಕರೆದು ವಿವಿಧ ವಿಚಾರದ ಬಗ್ಗೆ ಚರ್ಚೆ ನಡೆಸಿ, ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕ ಮತ್ತು ಎರಡು ಜೊತೆ ಸಮವಸ್ತ್ರಗಳನ್ನು ನೀಡುವ ಜೊತೆಗೆ ಪ್ರತಿ ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಯಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಪೋಷಕರಿಗೆ ಅರಿವು ಮಾಡಿಸಬೇಕು ಮತ್ತು ಸಾದ್ಯ ದಷ್ಟು ಮಕ್ಕಳನ್ನು ಶಾಲೆಗೆ ಕರೆ ತರಬೇಕು ಎಂಬ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಇಂದು ಅದ್ದೂರಿ ಶಾಲಾ ಪ್ರಾರಂಭೋತ್ಸವ ನಡೆಸಲಾಗಿದೆ ಎಂದರು.
2024-25 ನೇ ಸಾಲಿನ ಶೈಕ್ಷನ್ಯೂಸ್ ವರ್ಷವನ್ನ ಗುಣಾತ್ಮಕ ಕಲಿಕೆಗಾಗಿ “ಶೈಕ್ಷಣಿಕ ಬಲವರ್ಧನ ವರ್ಷ 2024” ದ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲ ಪೋಷಕರು ಇಂದಿನಿಂದಲೆ ಶಾಲೆಗಳಲ್ಲಿ ಪಾಠಗಳು ಪ್ರಾರಂಭವಾಗುವುದರಿಂದ ಮಕ್ಕಳನ್ನ ಶಾಲೆಗೆ ಕಳುಹಿಸಲು ಮನವಿ ಮಾಡುತ್ತಿದ್ದು. ಸರ್ಕಾರಿ ಶಾಲೆಗೆ ಮಕ್ಕಳನ್ನ ದಾಖಲು ಮಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಅನುಭವಿ ಶಿಕ್ಷಕರ ಜೊತೆಗೆ ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ ಯೋಜನೆ, ಕಂಪ್ಯೂಟರ್ ಕಲಿಕೆ, ಹತ್ತು ಹಲವು ಉಚಿತ ಯೋಜನೆಗಳಿದ್ದು ಇದರ ಸದುಪಯೋಗವನ್ನ ಪಡೆದುಕೊಳ್ಳುವಂತೆ ಮನವಿ ಮಾಡಿದರಲ್ಲದೆ ಮಕ್ಕಳು ಪ್ರಾರಂಭದಿಂದಲೆ ಕಲಿಕೆಗೆ ಆಧ್ಯತೆ ನೀಡುವಂತೆ ಹಾಗೂ ಈ ಸಾಲಿನಲ್ಲಿ ಉತ್ತಮ ಫಲಿತಾಂಶ ಬರಲು ಎಲ್ಲರೂ ಉತ್ತಮ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಿದ ಇಂಗಿತ ವ್ಯಕ್ತಪಡಿಸಿದರು.
ಬಾಕ್ಸ್ ನ್ಯೂಸ್ : ಕೆ.ಪಿ.ನಾರಾಯಣ್. ಕ್ಷೇತ್ರ ಶಿಕ್ಷಣಾಧಿಕಾರಿ ಬೇಲೂರು. :- ಇತ್ತೀಚಿನ ದಿನದಂದು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳನ್ನು ಅತ್ಯಂತ ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು ಎಂದು ಸದ್ಯ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಲಾಗಿದೆ. ಒಂದು ವೇಳೆ ಶಾಲಾ ಅವರಣದಲ್ಲಿ ಅಸ್ವಚ್ಚತೆ ಮತ್ತು ಅನಗತ್ಯ ವಸ್ತುಗಳ ಕೊಠಡಿ ಕಂಡು ಬಂದರೆ ಖಂಡಿತ ಇಂತವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲು ಮೀನಾ ಮೇಷ ಎಣಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.