ಆಲೂರು:- ಪಟ್ಟಣದ ದೊಡ್ಡಿ ಬೀದಿ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಮಲೇರಿಯಾ ಹಾಗೂ ಡೆಂಗಿ ಜ್ವರ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ಶುಕ್ರವಾರ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಂದ ಮನೆ ಮನೆ ಭೇಟಿ ನೀಡಿ ಲಾರ್ವ ಸಮೀಕ್ಷೆ ಮಾಡಿ ರೋಗಗಳ ನಿಯಂತ್ರಣ ಮಾಡಲು ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಂದಕುಮಾರ್ ಚಾಲನೆ ನೀಡಿದರು
ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಎಲ್ಲರೂ ಕೂಡ ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ. ನಿಂತ ನೀರಿನಿಂದಲೇ ಹೆಚ್ಚಾಗಿ ಮಲೇರಿಯ ಹಾಗೂ ಡೆಂಗಿ ಹರಡುವ ವಿಚಾರ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಎಲ್ಲರಿಗೂ ತಿಳಿದಿದ್ದು, ಮನೆ ಮನೆಯಲ್ಲಿಯೂ ನಿಂತ ನೀರನ್ನು ಸ್ವಚ್ಛಗೊಳಿಸಿ ಯಾವುದೇ ಕಾಯಿಲೆಗಳು ಬರದಂತೆ ಕಾಪಾಡಿಕೊಳ್ಳುವಂತೆ ತಿಳಿಸಿದರು.
ತಾಲೂಕು ಕಾರ್ಯನಿರ್ವಣಾ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಆಸ್ತಿ ಅಂತಸ್ತಿಗಿಂತ ಆರೋಗ್ಯ ವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆ ಹಾಗೂ ಪಂಚಾಯತಿ ಇಲಾಖೆಗಳು ಕಂದಾಯ ಇಲಾಖೆಗಳು ಎಲ್ಲಾ ಇಲಾಖೆಗಳು ಸಹಕರಿಸುತ್ತಿದ್ದು, ಸಾರ್ವಜನಿಕರು ಸಹ ಅವರೊಂದಿಗೆ ಸಹಕರಿಸಿ ಆರೋಗ್ಯಕ್ಕೆ ಮಾರಕವಾಗಿರುವ ಮಲೇರಿಯಾ ಹಾಗೂ ಡೆಂಗಿ ಅಂತ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡಲು ಸಹಕರಿಸುವಂತೆ ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ನಿಸಾರ್ ಫಾತಿಮಾ ಮಾತನಾಡಿ ಎಲ್ಲೆಡೆ ಡೆಂಗ್ಯೂ ಜ್ವರ ಹಾಗೂ ಮಲೇರಿಯಾ ರೋಗವು ಹೆಚ್ಚಾಗಿ ಹರಡುತ್ತಿದ್ದು, ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರ ಸಹಾಯದಿಂದ ಲಾರ್ವ ಸಮೀಕ್ಷೆ ಮಾಡುವ ಮೂಲಕ ಲಾರವಗಳನ್ನು ನಾಶಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯೂ ಹೆಚ್ಚಾಗುವ ಸಾಧ್ಯತೆಯಿದ್ದು, ಮಲೇರಿಯಾ ಹಾಗೂ ಡೆಂಗಿ ಜ್ವರ ನಿಯಂತ್ರಣದಲ್ಲಿಡಲು ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಬಳಿ ಇರುವ ನೀರಿನ ತೊಟ್ಟಿಗಳು, ಡ್ರಮ್ ಗಳು ನೀರು ಸಂಗ್ರಹವಾಗುವ ಇತರೆ ತ್ಯಾಜ್ಯ ವಸ್ತುಗಳು ಹಾಗೂ ಮನೆಯ ಪರಿಸರದ ಸುತ್ತಮುತ್ತ ಸುಚಿತ್ವವನ್ನು ಕಾಪಾಡುವ ಮೂಲಕ ಮಲೇರಿಯಾ ಹಾಗೂ ಡೆಂಗಿ ಜ್ವರದಂತಹ ಮಾರಕ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ತಿಳಿಸಿದರು.
ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಜಯಪ್ರಕಾಶ್ ಮಾತನಾಡಿ ಡೆಂಗಿ ಜ್ವರ ಈಡಿಸ್ ಈಜಿಪ್ಟೈ ಎಂಬ ಸೊಳ್ಳೆ ಕಚ್ಚುವಿಕೆಯಿಂದ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ನಾವು ಪ್ರತಿನಿತ್ಯ ಬಳಸುವ ನೀರಿನ ತೊಟ್ಟಿಗಳು ಡ್ರಮ್ ಗಳು ಹಂಡೆಗಳು ಕಂಟೈನರ್ ಗಳು ಇವುಗಳನ್ನು ಶುಚಿತ್ವದಿಂದ ಕಾಪಾಡಿಕೊಳ್ಳುವುದರಿಂದ ಮಾರಕ ರೋಗವನ್ನು ತಡೆಗಟ್ಟಬಹುದು.
ಈ ರೋಗದ ಸೋಂಕು ಇದ್ದವರಿಗೆ ತೀವ್ರ ಜ್ವರ ತಲೆನೋವು ಕಣ್ಣುಗಳ, ಮಾಂಸಖಂಡ, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಮೂಗು ಬಾಯಿಗಳಲ್ಲಿ ರಕ್ತಸ್ರಾವ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಲು ಸಮುದಾಯ ಹಾಗೂ ಇತರೆ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಾಯ ಅತಿ ಮುಖ್ಯ. ಎಲ್ಲರ ಸಹಕಾರ ಇದ್ದಲ್ಲಿ ನಿಯಂತ್ರಣ ಮಾಡುವುದು ಸುಲಭ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಂದಕುಮಾರ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸ್ಟೀಫನ್ ಪ್ರಕಾಶ್, ತಾಲೂಕು ಆರೋಗ್ಯ ಅಧಿಕಾರಿ ನಿಸ್ಸಾರ್ ಫಾತಿಮಾ, ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಡಾಕ್ಟರ್ ಜಯಪ್ರಕಾಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸತೀಶ್ ಮೋಹನ್, ಮುರಳಿ, ಹಾಗೂ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.