ಹಾಸನ : ರಚಿತವಾದ ಸಾಹಿತ್ಯವು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಒಂದು ಉತ್ತಮ ಮಾರ್ಗವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೇಬರ್ ಟೂತ್ ಪ್ರಕಾಶನದಿಂದ ಪ್ರಕಟಿತವಾದ ಹರೀಶ್ ಕಟ್ಟೆ ಬೆಳಗುಳಿಯವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೇಖಕರು ಉತ್ತಮವಾದ ಕೃತಿಗಳನ್ನು ರಚಿಸಿದ್ದು, ಪ್ರಸ್ತುತ ಜನಮಾನಸದ ಬಗೆಯನ್ನು ತಮ್ಮ ಬರವಣಿಗೆಯಲ್ಲಿ ಅನಾವರಣ ಗೊಳಿಸಿದ್ದಾರೆ ಎಂದರು.

ಪತ್ರಕರ್ತರೂ ಕೂಡ ಒಂದು ಬಗೆಯಲ್ಲಿ ಸಾಹಿತಿಗಳೇ, ಯಾವುದೇ ಕಾರ್ಯಕ್ರಮವಾದರೂ ಅದನ್ನು ಓದುಗರ ಬಳಿ ತಲುಪಿಸುವ ಕಾರ್ಯ ಮಾಡುತಿದ್ದು, ಅದನ್ನು ಅವಸರದ ಸಾಹಿತ್ಯ ಎನ್ನಬಹುದು, ಈ ಹಿಂದೆ ಡಿ.ವಿ.ಗುಂಡಪ್ಪನವರು ಕೂಡ ಅವರ ಕಾಲಘಟ್ಟದ ಬದುಕಿನ ರೀತಿ ನೀತಿಗಳನ್ನು ದೃಶ್ಯಕಾವ್ಯದಂತೆ ರಚಿಸಿದ್ದಾರೆ, ಅವರ ಮಂಕುತಿಮ್ಮನ ಕಗ್ಗ ಮೇರು ಕೃತಿಯಾಗಿದ್ದೂ ಅವರು ಕೂಡ ಪತ್ರಕರ್ತರೇ ಅಗಿದ್ದರು, ಇದೇ ರೀತಿ ಹಲವಾರು ಮಹನೀಯರು ಪತ್ರಕರ್ತರಾಗಿದ್ದು, ಸಾಹಿತ್ಯ ರಚನೆಯಲ್ಲಿ ರಚಿಸಿದ್ದಾರೆ.

ಹರೀಶ್ ಕಟ್ಟೆ ಬೆಳಗುಳಿಯವರು ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದಾರೆ, ಅದನ್ನು ಅವರು ಪ್ರಸ್ತುತ ಜಗತ್ತಿನ ಬಗ್ಗೆ ವಿಭಿನ್ನ ದೃಷ್ಟಿಕೋನ ಇಟ್ಟುಕೊಂಡು ಅಧ್ಯಯನ ಮಾಡಿ ಬರವಣಿಗೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ ಎಂದು ಹೇಳಿದರು.

ಸಾಹಿತ್ಯವು ಕೂಡ ಹೊಟ್ಟೆ ತುಂಬಿದ ಸಾಹಿತ್ಯ, ಹೊಟ್ಟೆ ಹಸಿವಿನ ಸಾಹಿತ್ಯ ಬೇರೆ ಬೇರೆ ರೀತಿಯಾದಾಗಿದ್ದು, ಹಸಿವಿನ ಸಾಹಿತ್ಯದ ಭಾವನೆಗಳೇ ಬೇರೆಯಾಗಿವೆ, ಎಂದು ವಿಶ್ಲೇಷಿಸಿದ ತಗಡೂರ್ ರವರು ಪ್ರಸ್ತುತ ಮೊಬೈಲ್ ಹಾವಳಿಯಿಂದ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಹರೀಶ್ ಕಟ್ಟೆ ಬೆಳಗುಳಿ ರಚಿತ ಅನ್ನದ ಅಗುಳ ಅತ್ಮಲಿಂಗವಾಗಿಸಿ ಸುಳ್ಳಾಡಿದನೆ ಸರ್ವಜ್ಞ ಹಾಗೂ ಇದು ಹೂವಿನ ಲೋಕವೇ ಎಂಬ ಮೂರು ಕೃತಿಗಳ ಬಿಡುಗಡೆಯನ್ನು ಮೈಸೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಹಾಗೂ ಸಾಹಿತಿ ಎಂ.ಎಸ್.ಶೇಖರ್ ಮಾಡಿದರು.

ಕೃತಿ ಪರಿಚಯವನ್ನು ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಮತ್ತು ಕವಿ ಡಾ|| ಜಯಶಂಕರ್ ಹಲಗೂರ್ ಮತ್ತು ಹಿರಿಯ ಪತ್ರಕರ್ತ ದಯಾಶಂಕರ್ ಮೈಲಿ ಹಾಗೂ ಮಂಗಳೂರಿನ ವಕೀಲ ಮತ್ತು ಪತ್ರಕರ್ತ ಸುಕೇಶ್ ಕುಮಾರ್ ಶೆಟ್ಟಿ ನಡೆಸಿಕೊಟ್ಟರು.

ಸುಳ್ಳಾಡಿದನೆ ಸರ್ವಜ್ಞ ಎಂಬ ಕೃತಿ ಪರಿಚಯವನ್ನು ಮಾಡಿಕೊಟ್ಟ ಹಿರಿಯ ಪತ್ರಕರ್ತ ದಯಾಶಂಕರ್ ಮೈಲಿ ಮಾತನಾಡಿ, ಸಾಹಿತ್ಯ ಸಮಾಜದ ಪ್ರತಿಬಿಂಬ, ಇದರಲ್ಲಿ ಆಯಾ ಕಾಲಘಟ್ಟದ ಜನ, ಜೀವನ, ಸಂಸ್ಕೃತಿಗಳನ್ನು ದಾಖಲಿಸುವ ಪ್ರಕ್ರಿಯೆಯಾಗಿದ್ದು, ಸುಳ್ಳಾಡಿದನೆ ಸರ್ವಜ್ಞ ಎಂಬ ಕೃತಿಯಲ್ಲಿ ಲೇಖಕರು ವಿಭಿನ್ನತೆಯನ್ನು ದಾಖಲಿಸಿದ್ದಾರೆ ಎಂದರು.

ಸರ್ವಜ್ಞನ ಒಂದು ವಚನ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಇಂದಿನ ಕಾಲದಲ್ಲಿ ಸುಳ್ಳಾಗುವಂತೆ ಕಾಣುತ್ತಿದೆ, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ, ಕೃಷಿಯನ್ನು ತ್ಯಜಿಸಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಬಯಸುತ್ತಿದ್ದಾನೆ, ಇದರಿಂದ ಅನೇಕರು ರೈತರನ್ನು ಉಳಿಸಿ ಎಂದು ಹೋರಾಟಗಳನ್ನು ಮಾಡುತಿದ್ದಾರೆ, ಆದರೆ ಕೃಷಿಕರ ಪರಿಸ್ಥಿತಿ ಆಯೋಮಯವಾಗಿದೆ. ಕಾಡು ನಾಶವಾಗುತ್ತಿದೆ, ಪ್ರಕೃತಿಯ ಮೇಲೆ ಹೆಚ್ಚಿನ ಪರಿಣಾಮಗಳಾಗುತಿದ್ದು, ಯಾವುದೇ ಸರ್ಕಾರ ಭೂಮಿಯ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ ಎಂದ ಅವರು, ರಾಜಕಾರಣ ಲಾಭದಾಯಕ ಉದ್ಯಮವಾಗುತ್ತಿದ್ದು, ಚುನಾವಣೆಗಳಲ್ಲಿ ಕ್ಯಾಸ್ಟ್ ಮತ್ತು ಕ್ಯಾಷ್ ಹೆಚ್ಚಾಗಿದೆ, ಲೇಖಕರು ಪ್ರಸ್ತುತದಲ್ಲಿ ಪ್ರಕೃತಿ ನೀಡುತ್ತಿರುವ ಎಚ್ಚರಿಕೆಯನ್ನು ತಮ್ಮ ಕೃತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜನಮಿತ್ರ ಪತ್ರಿಕೆಯ ಪ್ರಧಾನ ಸಂಪಾದಕ ಹೆಚ್.ಬಿ.iದನಗೌಡ, ಪದವಿಪೂರ್ವ ಶಾಲಾಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಮಹಲಿಂಗಯ್ಯ ಅಮೋಘವಾಣಿ ಪತ್ರಿಕೆಯ ಸಂಪಾದಕ ರಂಗಸ್ವಾಮಿ ಎಸ್.ಡಿ. ಮತ್ತು ಲೇಖಕ ಹರೀಶ್ ಕಟ್ಟೆ ಬೆಳಗುಳಿ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed