ಆಲೂಗಡ್ಡೆ ಬೆಳೆಯ ವಿಚಾರ ಸಂಕಿರಣ
ಹಾಸನದ : ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2024-25ರ ಅಂಗವಾಗಿ ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ “ಆಲೂಗಡ್ಡೆ ಬೆಳೆಯ ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಜೋಡಿಕೃಷ್ಣಾಪುರ ಗ್ರಾಮದಲ್ಲಿ ಆಲೂಗಡ್ಡೆ ಪ್ರಮುಖ ಬೆಳೆಯಾಗಿದ್ದು ಇದರ ಕುರಿತಾದ ಮಾಹಿತಿಯನ್ನು ರೈತರಿಗೆ ತಿಳಿಸಲು ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖಾಂತರ ರೈತರಿಗೆ ಆಲೂಗಡ್ಡೆ ಬೆಳೆಯಲು ಅವಶ್ಯವಿರುವ ಮಾಹಿತಿಗಳಾದ ಭೂಮಿ ಸಿದ್ಧತೆ, ಬಿತ್ತನೆ ಬೀಜದ ಆಯ್ಕೆ, ಕುಡಿ ಕಾಂಡ ತಂತ್ರಜ್ಞಾನ ಮುಖಾಂತರ ಸಸಿ ಮಾಡುವ ವಿಧಾನ, ಗೊಬ್ಬರ ಹಂಚಿಕೆ ವಿಧಾನ ಮತ್ತು ಪ್ರಮಾಣ, ನೀರಾವರಿ ಇನ್ನು ಮುಂತಾದ ಸಮಗ್ರ ಬೇಸಾಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ ಹಾಗೂ ರೋಗಗಳಾದ ಕೊನೆಯ ಅಂಗಮಾರಿ ರೋಗ, ಮೊದಲ ಅಂಗಮಾರಿ ರೋಗ, ದುಂಡಾಣು ಸೊರಗು ರೋಗ, ನಂಜು ರೋಗ ಹಾಗೂ ಪ್ರಮುಖ ಕೀಟ ಬಾಧೆಗಳಾದ ಹೇನು, ನುಸಿ, ಜಿಗಿಹುಳು, ಗಡ್ಡೆ ಕೊರೆಯುವ ಹುಳು, ಕಾಂಡ ಕೊರೆಯುವ ಹುಳು, ಎಲೆ ತಿನ್ನುವ ಹುಳು ಮುಂತಾದ ರೋಗದ ಮತ್ತು ಕೀಟದ ಲಕ್ಷಣಗಳು ಹಾಗೂ ನಿರ್ವಹಣ ಕ್ರಮಗಳು, ಕೊಯ್ಲು ಮತ್ತು ಇಳುವರಿ, ಆಲೂಗಡ್ಡೆ ಬೇಸಾಯದ ವೆಚ್ಚ ಮತ್ತು ಆದಾಯ, ಮೌಲ್ಯವರ್ಧಿತ ಆಲೂಗಡ್ಡೆ ಉತ್ಪನ್ನಗಳು ಸೇರಿದಂತೆ ಆಲೂಗಡ್ಡೆ ಬೆಳೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಬಸವರಾಜು ( ಕೀಟಶಾಸ್ತ್ರ ವಿಭಾಗ) ಹಾಗೂ ಡಾ.ಬೈರಪ್ಪನವರ್ ( ಬೇಸಾಯಶಾಸ್ತ್ರ ವಿಭಾಗ) ಹಾಗೂ ಗ್ರಾಮದ ರೈತರು ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು