ಬೇಲೂರು : ವಿದ್ಯಾರ್ಥಿಗಳ ಪ್ರಾಥಮಿಕ ಹಂತದಲ್ಲಿ ಅವರ ಜಾಣ್ಮೆಯನ್ನು ಗುರುತಿಸಲು ಮಕ್ಕಳ ಸಂತೆ ತುಂಬಾ ಸಹಕಾರಿಯಾಗಲಿದೆ ಎಂದು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರಶಾಂತ್ ಹೇಳಿದರು.
ಪಟ್ಟಣದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಎರಡು ವರ್ಷಕ್ಕೊಮ್ಮೆ ನಮ್ಮ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ.
ಮಕ್ಕಳು ತುಂಬ ಉತ್ಸಾಹದಿಂದ ಮನೆಯಿಂದಲೇ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ.
ಆಹಾರ ಹೇಗೆ ತಯಾರು ಮಾಡಬೇಕು, ಅದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿವಳಿಕೆ, ಶುಚಿ-ರುಚಿಯ ಬಗ್ಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶ ಎಂದ ಅವರು, ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಂದರೆ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದರು.
ನಂತರ ಮಾತನಾಡಿದ ವಿದ್ಯಾ ಸಂಸ್ಥೆಯ ಸಹ ಕಾರ್ಯದರ್ಶಿ ಅನಂತ ಸ್ವಾಮಿ ಮಕ್ಕಳ ಸಂತೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ವ್ಯವಹಾರದ ಜ್ಞಾನವನ್ನು ಹೊಂದಿರುತ್ತಾರೆ.
ಪಟ್ಟಣದ ವಿದ್ಯಾರ್ಥಿಗಳಿಗೆ ಆ ವ್ಯವಹಾರಿಕ ಜ್ಞಾನ ಇರುವುದಿಲ್ಲ.ಆದ್ದರಿಂದ ಪ್ರತಿ ೨ ವರ್ಷಗಳಿಗೊಮ್ಮೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾದರೆ ಸಾಲದು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿದಾಗ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ.ಹಾಗೂ ಸಾಂಸ್ಕೃತಿಕ ಚಟುವಟಿಕೆ ಜೊತೆಯಲ್ಲಿ ಸಾರ್ವಜನಿಕರ ಜೊತೆ ಬೆರೆತು ಕಲಿಯಲು ಸಹಕಾರಿ ಯಾಗುತ್ತದೆ ಎಂದರು.
ನಂತರ ಮಾತನಾಡಿದ ಶಿಕ್ಷಕಿ ವೀಣಾಶಾರದವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸುಗಳು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ನಾವು ಶಿಕ್ಷಕರೆನ್ನದೆ ಗ್ರಾಹಕರಾಗಿ ಪಾಲ್ಗೊಂಡಿದ್ದೇವೆ ಎಂದರು.
ಮನೆಯಿಂದ ಪೋಷಕರ ಬಳಿ ಮಕ್ಕಳು ಬೋಂಡಾ, ವಡೆ, ಚಕ್ಕುಲಿ, ನಿಪ್ಪಟ್ಟಿನಂತಹ ವಿವಿಧ ತಿಂಡಿ ತಿನಿಸು ಮಾಡಿಸಿಕೊಂಡು ಆಗಮಿಸಿದ್ದರು.
ಕೋಸು, ಬದನೆ, ತೆಂಗಿನಕಾಯಿ, ಪಪ್ಪಾಯಿ, ಕೊತ್ತಂಬರಿ, ವಿವಿಧ ತರಕಾರಿ, ಸೊಪ್ಪುಗಳನ್ನು ತಂದಿದ್ದರು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದೆಡೆ ಜೋಡಿಸಿ ವ್ಯಾಪಾರಕ್ಕೆ ಇಳಿದರು. ವ್ಯಾಪಾರಿಗಳನ್ನು ಮೀರಿಸುವಂತೆ ಕೂಗಿಕೊಂಡು ತಮ್ಮದೆ ಆದ ಶೈಲಿಯಲ್ಲಿ ವ್ಯಾಪಾರದಲ್ಲಿ ಮಗ್ನರಾದರು.
ಗ್ರಾಹಕ ಪೋಷಕ, ಗ್ರಾಮಸ್ಥರೊಂದಿಗೆ ಚೌಕಾಸಿ ವ್ಯಾಪಾರಕ್ಕೆ ಇಳಿದು ವ್ಯಾಪಾರ ಕೌಶಲತೆ ಮೆರೆದರು. ತೂಕದ ಯಂತ್ರದಲ್ಲಿ ಕರಾರುವಕ್ಕಾಗಿ ಮಾರಾಟ ವಸ್ತುಗಳನ್ನು ತೂಗಿದರು.
ಒಂದಕ್ಕೆ ಒಂದು ಉಚಿತ ಎಂದು ಹಲವರು ಗಿರಾಕಿ ಸೆಳೆಯಲು ವ್ಯಾಪಾರ ತಂತ್ರವನ್ನು ಬಳಸಿದರು.
ಮನೆಯಿಂದಲೇ ಬಟ್ಟೆ ಬ್ಯಾಗ್ ತರಬೇಕು ಎನ್ನುವುದು ತಿಳಿಯುವುದಿಲ್ಲವೇ. ಪ್ಲಾಸ್ಟಿಕ್ ಹಾನಿಕಾರಕ. ಪರಿಸರ ಸ್ನೇಹಿಯಾಗಿ ಬದುಕಲು ಮುಂದಾಗಬೇಕು ಅಲ್ಲವೇ ಎಂದು ಪ್ರಶ್ನಿಸಿದರು. ಕೆಲವು ಗಂಟೆ ನಡೆದ ಮಿನಿ ವ್ಯಾಪಾರ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿ ಖುಷಿಪಟ್ಟರು.