ಬೇಲೂರು: ತಾಲ್ಲೂಕು ಹಳೇಬೀಡು ಮಾದಿಹಳ್ಳಿ ಹೋಬಳಿಯ ಜೈನರ ಗುತ್ತಿ ಅತಿಶಯ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲಿಯೆ ದೊಡ್ಡದಾದ 24ಅಡಿ ಎತ್ತರದ ಪದ್ಮಾಸನದಲ್ಲಿ ಕುಳಿತಿರುವ ಶೀತಲನಾಥ ತೀರ್ಥಂಕರ ಹಾಗೂ 31 ಅಡಿ ಎತ್ತರದ ಮುನಿಸುವ್ರತ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ನವೆಂಬರ್ 29ರಿಂದ ಡಿಸೆಂಬರ್ 4ರವರೆಗೆ ಬೃಹತ್ ಪಂಚಕಲ್ಯಾಣ ಮಹೋತ್ಸವ ನಡೆಯಲಿದ್ದು ಭರದ ಸಿದ್ದತೆ ನಡೆಯುತ್ತಿದೆ.
ಕ್ಷೇತ್ರದ ಸುತ್ತಮುತ್ತಲಿನ ಗ್ರಾಮದ ಅಡಗೂರು, ಹೊಲಬಗೆರೆ, ಕಡದರವಳ್ಳಿ, ಹಾಸನ, ದೇವಿಹಳ್ಳಿಯ ಜೈನ ಬಾಂಧವರು ಪಂಚಕಲ್ಯಾಣ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿರುವ ದಿಗಂಬರ ಜೈನ ಮುನಿ ವೀರ ಸಾಗರ ಮುನಿ ಮಹಾರಾಜರ ಸಲಹೆ ಮಾರ್ಗದರ್ಶನದಲ್ಲಿ ಜೈನರ ಗುತ್ತಿಯ ಭಗವಾನ್ ಶೀತಲನಾಥ ದಿಗಂಬರ ಜೈನ್ ಅತಿಶಯ ಕ್ಷೇತ್ರ ಚಾರಿಟಬಲ್ ಟ್ರಸ್ಟ್ ನವರು ಪಂಚಕಲ್ಯಾಣ ಮಹೋತ್ಸವದ ತಯಾರಿ ನಡೆಸುತ್ತಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಉತ್ತರ ಭಾರತದಿಂದಲೂ ಜೈನ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಬೃಹತ್ ಪೆಂಡಾಲ್ ನಿರ್ಮಿಸಲು ವಿಶಾಲವಾದ ಮೈದಾನವನ್ನು ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದೆ. ದೂರದಿಂದ ಭಕ್ತರು ಬರುವುದರಿಂದ ಊಟೋಪಚಾರಕ್ಕೂ ದೊಡ್ಡ ಪೆಂಡಾಲ್ ನಿರ್ಮಿಸಲು ಸಿದ್ದತೆ ನಡೆದಿದೆ.
ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪಾರ್ಕಿಂಗ್ ಸ್ಥಳಕ್ಕಾಗಿ ಸುತ್ತಮುತ್ತಲಿನ ರೈತರು ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಮಹೋತ್ಸವ ಕಾರ್ಯದರ್ಶಿ ನೇಮಿರಾಜ ಅರಿಗ ಹೇಳಿದರು.
ವಿವಿಧ ಪೂಜಾ ವಿಧಾನ ಆರಾಧನೆಗಳು ಜೈನಾಗಮ ಪರಿಣಿತರು, ಪ್ರತಿಷ್ಠಾಚಾರ್ಯರು ಹಾಗೂ ಪುರೋಹಿತ ವರ್ಗದವರು ಜೈನ ಮುನಿಗಳು, ಜೈನ ಮಠಗಳ ಭಟ್ಟಾರಕ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುತ್ತದೆ.
ಕ್ಷೇತ್ರದಲ್ಲಿ 6ದಿನ ಮಂಗಳವಾದ್ಯ ತಂಡದೊಂದಿಗೆ ಮಂತ್ರ ಘೋಷ್ ಹಾಗೂ ಜಿನ ಗಾಯನ ಗೋಷ್ಠಿ ಮೊಳಗಿರುತ್ತದೆ. ಉತ್ಸವದಲ್ಲಿ ಎರಡು ಆನೆ, 5 ಕುದುರೆಗಳು ಭಾಗವಹಿಸಲಿವೆ.
ಮುಂಜಾನೆಯಿಂದ ರಾತ್ರಿಯವರೆಗೂ ಬಿಡುವಿಲ್ಲದಂತೆ ಪೂಜಾ ವಿಧಾನ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬಿಡುವಿಲ್ಲದಂತೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ ಹೇಳಿದರು.
ವೀರ ಸಾಗರ ಮುನಿ ಮಹಾರಾಜರು ಜೈನ ಧರ್ಮ ಬಾಂಧವರನ್ನು ಒಗ್ಗೂಡಿಸಿದ್ದರಿಂದ ಜೈನರ ಗುತ್ತಿ ಅಭಿವೃದ್ದಿ ಹೊಂದುತ್ತಿದೆ. ಕ್ಷೇತ್ರದಲ್ಲಿ ಬೃಹತ್ ಪಂಚಕಲ್ಯಾಣ ಮಹೋತ್ಸವ ನಡೆಯುತ್ತಿದೆ ಎಂದು ಮಾಧ್ಯಮ ಸಮಿತಿ ಸಂಚಾಲಕ ಎಸ್.ಎನ್.ಅಶೋಕ್ ಕುಮಾರ್ ಹೇಳಿದರು.
ಜೈನರ ಗುತ್ತಿಯ ಸಂಕ್ಷಿಪ್ತ ಇತಿಹಾಸಕಳೆದ ಒಂದು ದಶಕದಿಂದ ಅಭಿವೃದ್ದಿ ಕಾಣುತ್ತಿರುವ ಜೈನರಗುತ್ತಿ ಐತಿಹಾಸಕ ಮಹತ್ವ ಹೊಂದಿರುವ ಪುಣ್ಯ ಕ್ಷೇತ್ರವಾಗಿದ್ದು, ಅತಿಶಯ ಕ್ಷೇತ್ರ ಎಂದು ಪರಿಗಣಿಸಲ್ಪಟ್ಟಿದೆ. ಶ್ರವಣಬೆಳಗೂಳದ ಮಠಾದೀಶರಿಗೆ ಬಲ್ಲಾಳರಾಯ ಜೀವ ರಕ್ಷಾ ಪರಿಪಾಲಕ ಎಂದು ಹೊಯ್ಸಳ ದೊರೆಗೆ ಬಿರುದು ನೀಡಿದ ಸ್ಥಳವಾಗಿದೆ.
ಹೊಯ್ಸಳರ ಕಾಲದಲ್ಲಿ ರಾಶಿಗುಡ್ಡದಲ್ಲಿ ಜ್ವಾಲಮುಖಿ ಸಂಭವಿಸಿ ಭೂಮಿ ಬಿರುಕು ಬಿಟ್ಟಿತ್ತು. ವ್ಯಾಪಿಸುತ್ತಿದ್ದ ಜ್ವಾಲೆಯನ್ನು ಶಮನಗೊಳಿಸಿ ಬಿರುಕು ನಿಲ್ಲಿಸುವುದು ಹೊಯ್ಸಳ ದೊರೆ ಬಲ್ಲಾಳರಾಯನಿಗೆ ಕಷ್ಟವಾಗಿ ಪರಿಣಮಿಸಿತ್ತು.
ಶ್ರವಣಬೆಳಗೊಳದ ಚಾರುಕೀರ್ತಿ ಪೀಠದ ಸ್ವಾಮೀಜಿ ಕೂಶ್ಮಾಂಡಿನಿ ಮೂರ್ತಿಯನ್ನು ಆನೆಯ ಮೇಲೆ ಆರೋಹಣ ಮಾಡಿಕೊಂಡು ಕರೆತಂದು ಪೂಜಾ ವಿಧಾನ ನಡೆಸಿದರು.
ಮಂತ್ರ ಪಠಣದೊಂದಿಗೆ ಕುಂಬಳಕಾಯಿ ಸಮರ್ಪಿಸಿದ ನಂತರ ಭೂಮಿ ಬಿರುಕು ನಿಂತಿತು ಎಂಬುದು ರಾಜಾವಳಿ ಗ್ರಂಥದಲ್ಲಿ ಉಲ್ಲೇಖವಾಗಿದೆ.
ಅಡಗೂರಿನಲ್ಲಿ ನೆಲೆಸಿದ್ದ ಎಸ್.ಪಿ.ನಾಗಕುಮಾರ್ ಬರಡು ಭೂಮಿಯಂತಿದ್ದ ಈಗಿನ ಜೈನರಗುತ್ತಿ ಸ್ಥಳದಲ್ಲಿ ಆಗಾಗ್ಗೆ ಪೂಜೆ ಮಾಡಿಸುತ್ತಿದ್ದರು.
ಕಾಲಕ್ರಮೇಣ ಅಡಗೂರಿನ ದಿವಂಗತ ರತ್ನರಾಜು(ಮರಿಯಣ್ಣ) ನಾಗಕುಮಾರ್ ಅವರಿಗೆ ಸಹಕಾರ ನೀಡಿದ್ದರು. 10 ವರ್ಷದ ಹಿಂದೆ ವಿಹಾರ ಬಂದ ದಿಗಂಬರ ಜೈನ ಮುನಿ ಜಿನ ಧರ್ಮ ಪ್ರಭಾವಕ ಯುವಸಂತ ವೀರಸಾಗರ ಮುನಿ ಮಹಾರಾಜರು ಜೈನರಗುತ್ತಿಗೆ ಭೇಟಿ ನೀಡಿದರು. ನಂತರ ಸಮಾಜ ಬಾಂಧವರನ್ನು ಒಗ್ಗೂಡಿಸಿ, ಟ್ರಸ್ಟ್ ರಚನೆ ಮಾಡಿದರು. ಶ್ರವಣಬೆಳಗೊಳ ಬಾಹುಬಲಿ ಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದ ದಿಗಂಬರ ಜೈನ ಮುನಿಗಳು ವಿಹಾರದ ಸಂದರ್ಭದಲ್ಲಿ ಜೈನರ ಗುತ್ತಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಮುನಿಗಳ ಪಾದ ಸ್ಪರ್ಶದಿಂದ ಜೈನರ ಗುತ್ತಿ ಈಗ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಹಳೇಬೀಡಿನ ಎಚ್.ಎಸ್.ಅನಿಲ್ ಕುಮಾರ್ ತಿಳಿಸಿದರು.