
ಅರೇಹಳ್ಳಿ: ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಪರಿವರ್ತಕ ಹಾನಿಯಾದ ಪರಿಣಾಮದಿಂದಾಗಿ ನಿವಾಸಿಗಳು ಕಳೆದ ಒಂದು ವಾರದಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೇಲೂರು ತಾಲೂಕು ಅರೇಹಳ್ಳಿ ಮುಖ್ಯರಸ್ತೆಯ ರೋಟರಿ ಭವನದ ಬಳಿಯಿರುವ ೧೦೦ಕೆವಿ ವಿದ್ಯುತ್ ಪರಿವರ್ತಕ ಕಳೆದ ಗುರುವಾರದಂದು ಸಿಡಿಲಿಗೆ ಹೊಡೆತಕ್ಕೆ ಹಾನಿಯುಂಟಾಗಿತ್ತು. ಪರಿಣಾಮವಾಗಿ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದಾದ ಬಳಿಕ ಸಿಂಗಲ್ ಫೇಸ್ ವಿದ್ಯುತ್ತನ್ನು ಇದೇ ಟಿಸಿ ಮೂಲಕ ಪೂರೈಸಲಾಗುತ್ತಿದೆ. ೫ ಕೊಳವೆ ಬಾವಿಗಳು ಈ ಟಿಸಿಯನ್ನೆ ಅವಲಂಬಿಸಿದ್ದು, ಓವರ್ ಹೆಡ್ ಟ್ಯಾಂಕ್ ಭರ್ತಿ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.
ಆದರೆ ಒಂದು ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಾರಣದಿಂದಾಗಿ ಕೊಳವೆ ಬಾವಿ ಮೋಟಾರು ಚಾಲೂ ಆಗದ ಪರಿಣಾಮ ಸಂತೋಷನಗರ, ಮೇಲನಹಳ್ಳಿ, ಈದ್ಗಾ ರಸ್ತೆ, ಮುಖ್ಯ ರಸ್ತೆಯ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರೈ ಮಾತನಾಡಿ, ” ಕಳೆದ ಒಂದು ವಾರದಿಂದ ಟಿಸಿ ಹಾನಿಯಾಗಿದೆ. ಸರಿಪಡಿಸುವಂತೆ ಜೆಇ ಗಮನಕ್ಕೆ ತರಲಾಗಿದೆ. ಆದರೆ ಜೆಇ ಯವರು ಈ ವಿಚಾರವನ್ನು ಮೇಲಾಧಿಕಾರಿಗಳು ಗಮನಕ್ಕೆ ತಂದಿದ್ದು ಅವರು ಅನುಮತಿ ನೀಡಬೇಕೆಂದು ಹೇಳುತ್ತಿದ್ದಾರೆ.
ಆದರೆ ನಾನಾ ವಾರ್ಡ್ ಗಳಲ್ಲಿ ವಾಸಮಾಡುತ್ತಿರುವ ೫೦೦ಕ್ಕೂ ಹೆಚ್ಚಿನ ನಿವಾಸಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು ಅತ್ಯಂತ ತ್ವರಿತವಾಗಿ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ ಸೆಸ್ಕ್ ಅಧಿಕಾರಿ ಕ್ರಮವಹಿಸಬೇಕೆಂದು ಆಗ್ರಹಿಸುತ್ತೇನೆ” ಎಂದರು.