ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಹೋಬಳಿ ಮೂರಕಣ್ಣು ಗುಡ್ಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು 14.36 ಎಕರೆ ಒತ್ತುವರಿ ಮಾಡಿ ನಿರ್ಮಿಸಿದ್ದ ಸ್ಟೋನ್‌ ವ್ಯಾಲಿ ರೆಸಾರ್ಟ್‌ ಅನ್ನು, ನ್ಯಾಯಾಲಯ ಆದೇಶದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ವಶಕ್ಕೆ ಪಡೆದರು.

ಅಚ್ಚನಹಳ್ಳಿ ಗ್ರಾಮದ ಮೂಲ ಸರ್ವೆ ನಂಬರ್‌ 92ರಲ್ಲಿ 9.36 ಎಕರೆ, ಹೊಸ ನಂಬರ್ 148/1 ರಲ್ಲಿ 3 ಹಾಗೂ 148/2 ರಲ್ಲಿ 2 ಎಕರೆ ಸೇರಿ ಒಟ್ಟು 14.36 ಎಕರೆ ಅರಣ್ಯ ಪ್ರದೇಶವನ್ನು ಸುಭಾಷ್‌ ಸ್ಟೀಫನ್, ಸಂತೋಷ್‌ ಸ್ಟೀಫನ್‌, ಡೆಸಿ ಸ್ಟೀಫನ್‌, ಕೆ.ಜೆ.ಸ್ಟೀಫನ್‌ ಎಂಬುವವರು ಒತ್ತುವರಿ ಮಾಡಿ, ರೆಸಾರ್ಟ್ ಹಾಗೂ ವಾಸದ ಮನೆ ನಿರ್ಮಾಣ ಮಾಡಿದ್ದರು.’ಈ ಒತ್ತುವರಿಯನ್ನು ಕರ್ನಾಟಕ ಅರಣ್ಯ ಕಾಯ್ದೆಯಡಿ ತೆರವು ಮಾಡಬೇಕು ಎಂದು 2022ರ ಜುಲೈ 26ರಂದು ಅಧಿಕೃತ ಅಧಿಕಾರಿ ಹಾಗೂ ಹಾಸನದ ಅರಣ್ಯ ಸಂಚಾರಿ ದಳ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನ್ಯಾಯಾಲಯ ಆದೇಶ ನೀಡಿತ್ತು.

ಈ ಆದೇಶದ ಅನ್ವಯ ಮಂಗಳವಾರ ಸ್ಟೋನ್‌ ವ್ಯಾಲಿ ರೆಸಾರ್ಟ್ ಹಾಗೂ ಮನೆಯನ್ನು ಖಾಲಿ ಮಾಡಿಸಿ, ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವ್ ಹಾಗೂ ವಲಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಈ ಅರಣ್ಯ ಪ್ರದೇಶ ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡು, ಇದು ಪ್ರಪಂಚದ ಜೀವ ವೈವಿಧ್ಯದ ತಾಣವಾಗಿದೆ. ಅನೇಕ ನದಿ ತೊರೆಗಳ ಉಗಮ ಪ್ರದೇಶವಾಗಿದೆ.

ಈ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರಾಗಿ ನೀಡಿ, ಪೋಡಿ ಮಾಡಿ, ಹೊಸ ಸರ್ವೆ ನಂಬರ್ ನೀಡಿರುವುದು, ಅರಣ್ಯ ಸಂರಕ್ಷಣಾ ಕಾಯ್ದೆ ಸ್ಟಷ್ಟ ಉಲ್ಲಂಘನೆಯಾಗಿದೆ.’ಕಂದಾಯ ಇಲಾಖೆಯಿಂದ 1,511 ಎಕರೆಗೂ ಮೀರಿ ಅನಧಿಕೃತ ಭೂ ಮಂಜೂರಾತಿಯಾಗಿದ್ದು, ನೂರಾರು ಎಕರೆ ಒತ್ತುವರಿ ಆಗಿದೆ. ಅಲ್ಲದೇ 100 ವರ್ಷಗಳೇ ಕಳೆದಿದ್ದರೂ, ಈ ಅರಣ್ಯವನ್ನು ಕಂದಾಯ ದಾಖಲಾತಿಗಳಲ್ಲಿ ಇಂಡೀಕರಣ ಮಾಡಿಲ್ಲ’ ಎಂದು ಅರಣ್ಯ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳ ವಿಶ್ಲೇಷಣೆಯಂತೆ ಮೂರಕಣ್ಣುಗುಡ್ಡ ಅರಣ್ಯ ಪ್ರದೇಶವನ್ನು ಅರಣ್ಯ ಭೂಮಿಯಿಂದ 1923ರಲ್ಲಿಯೇ ಕೈಬಿಟ್ಟಿರುವುದಾಗಿಯೂ ಹಾಗೂ ಪ್ರಸ್ತುತ ಇದು ಅರಣ್ಯವೇ ಅಲ್ಲ, ಕಂದಾಯ ಭೂಮಿ ಎಂದು ಪ್ರತಿಪಾದಿಸುತ್ತಿದ್ದು, ಸ್ಟೋನ್‌ ವ್ಯಾಲಿ ರೆಸಾರ್ಟ್‌ ಮಾಲೀಕ ಸುಭಾಷ್‌ ಸ್ಟೀಫನ್‌ ಎಂಬುವವರು ಹೊಸದಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ.ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದ್ದು, ಅರಣ್ಯ, ಬೆಟ್ಟಗಳನ್ನು ಕಡಿದು, ನೆಲ ಸಮತಟ್ಟು ಮಾಡಿ, ದೊಡ್ಡ ಗಾತ್ರದ ಮರಗಳನ್ನು ಕಡಿದು 2 ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿರುವುದು ಕಂಡು ಬಂದಿದೆ. 3.5 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, 5 ಎಕರೆ 19 ಗುಂಟೆಯಷ್ಟು ಅರಣ್ಯ ಪ್ರದೇಶವನ್ನು ಸಮತಟ್ಟು ಮಾಡಿ, ಗಿಡಗಂಟೆಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವ್ ಪ್ರಭು, ವಲಯ ಅರಣ್ಯ ಅಧಿಕಾರಿಗಳಾದ ಶಿಲ್ಪಾ, ಜಗದೀಶ್‌, ವಿನಯ್‌, ಇಟಿಎಫ್‌ ಆರ್‌ಎಫ್‌ಒ ಕಾಮ್ಲೇಕರ್‌, ಅರಕಲಗೂಡು ಆರ್‌ಎಫ್‌ಒ ಯಶ್ಮಾ ಮಾಚಮ್ಮ, ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ, ರೆಸಾರ್ಟ್‌ ಹಾಗೂ ಮನೆಯನ್ನು ವಶಕ್ಕೆ ಪಡೆದಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *