ಯಗಚಿ ನಾಲೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಆದೇಶದಂತೆ ಶುಕ್ರವಾರ ಜಿಲ್ಲಾಡಳಿತಕ್ಕೆ ಸೇರಿದ ವಾಹನವನ್ನು ಜಪ್ತಿ ಮಾಡಲಾಯಿತು.

ತಾಲ್ಲೂಕಿನ ಕಟ್ಟಾಯ ಹೋಬಳಿ ಡೋರನ ಹೊಸಳ್ಳಿ ಗ್ರಾಮದ ಕೆ.ಎಸ್. ಯೋಗೇಶ್ ಎಂಬುವರಿಗೆ ಸೇರಿದ ಸುಮಾರು 13 ಗುಂಟೆ ಜಮೀನನ್ನು 2006 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.ಅದಕ್ಕೆ ಸೂಕ್ತ ಪರಿಹಾರ ನೀಡಿರಲಿಲ್ಲ. ಇದರ ವಿರುದ್ಧ ಭೂ ಮಾಲೀಕರು ಕಾನೂನು ಹೋರಾಟ ಆರಂಭಿಸಿದ್ದರು.

2010 ರಲ್ಲಿ ನೋಟಿಫಿಕೇಶನ್ ಆಗಿದ್ದು, ಇನ್ನೂ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಯೋಗೇಶ್ ಅವರು ಹಾಸನದ ಕೋರ್ಟ್ ಮೊರೆ ಹೋಗಿದ್ದರು. 1 ಗುಂಟೆಗೆ ₹ 1 ಲಕ್ಷ ಪರಿಹಾರ ಕೊಡಬೇಕು ಎಂದು 2016 ರಲ್ಲಿ ಆದೇಶ ಆಗಿತ್ತು. ಆದರೆ ಈವರೆಗೂ ಸಂಬಂಧಪಟ್ಟವರು ಪರಿಹಾರ ನೀಡಿರಲಿಲ್ಲ.ವಸೂಲಿಗೆ ಹಾಕಿದರೂ, ವಿಶೇಷ ಭೂ ಸ್ವಾಧೀನ ಅಧಿಕಾರಿ ಹಣ ಕಟ್ಟಲಿಲ್ಲ. ಇದನ್ನು ಮತ್ತೊಮ್ಮೆ ಕೋರ್ಟ್‍ಗೆ ಮನವರಿಕೆ ಮಾಡಿದಾಗ, ಕಚೇರಿ ಜಪ್ತಿಗೆ ಕೋರ್ಟ್‌ ಆದೇಶ ಮಾಡಿತ್ತು.

ಅದರಂತೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತಕ್ಕೆ ಸೇರಿದ ಜೀಪನ್ನು ವಕೀಲರ ಸಮ್ಮುಖದಲ್ಲಿ ಕೋರ್ಟ್‌ ಸಿಬ್ಬಂದಿ ಜಪ್ತಿ ಮಾಡಿದರು.

ನ್ಯಾಯಾಲಯ 1 ಗುಂಟೆಗೆ ₹ 1 ಲಕ್ಷ ಪರಿಹಾರ ಕೊಡಬೇಕು ಎಂದು ಈ ಹಿಂದೆ ಹೇಳಿತ್ತು. ಆದರೆ ಈಗ ಬಡ್ಡಿ ಸೇರಿ ಜಿಲ್ಲಾಡಳಿತ ಸುಮಾರು ₹ 40 ಲಕ್ಷ ಅನ್ನು ಭೂ ಮಾಲೀಕರಿಗೆ ಪಾವತಿ ಮಾಡಬೇಕಿದೆ.

ಅದಕ್ಕಾಗಿ ವಾಹನ ಜಪ್ತಿ ಮಾಡಿದ್ದು, ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ ಎಂದು ಕೆ.ಎಸ್‌. ಯೋಗೇಶ್‌ ಪರ ವಕೀಲ ಮಂಜುನಾಥ್ ತಿಳಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed