ಆಲೂರು : ತಾಲ್ಲೂಕಿನ ಕಾಗನೂರು ಗ್ರಾಮದಲ್ಲಿ ಪಾದುಕೆಗಳು ಪತ್ತೆಯಾಗಿದ್ದು, ಈ ಭಾಗದಲ್ಲಿ ಶ್ರೀರಾಮ ಸಂಚರಿಸಿದ್ದಕ್ಕೆ ಸಾಕ್ಷಿಯಾಗಿದೆ ಎಂದು ಹಲವಾರು ಭಕ್ತರು ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.
ಕಾಗನೂರು ಗ್ರಾಮದಲ್ಲಿರುವ ಆಂಜನೇಯ ದೇವರಿಗೆ ಕುಂಭ ಸ್ನಾನ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಹಣ್ಣು ತುಪ್ಪ, ರಸಾಯನ, ಪಂಚಕಜ್ಜಾಯ ನೈವೇದ್ಯ, ಮಹಾಮಂಗಳಾರತಿ ನೆರವೇರಿಸುವುದು ವಾಡಿಕೆ.ಆದರೆ, ಇದೇ ಮೊದಲ ಬಾರಿಗೆ ಗೋಚರವಾದ ಪ್ರಾಚೀನ ಕಾಲದ ಕುರುಹುಗಳನ್ನು ಜನರು ಆಶ್ಚರ್ಯದಿಂದ ನೋಡುತ್ತಿದ್ದಾರೆ.
ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ. ದೂರದ ಹೇಮಾವತಿ ನದಿ ತೀರದಲ್ಲಿ ಪಾದಾರೆಕಲ್ಲು ಎಂಬ ಸ್ಥಳವಿದ್ದು, ಅಲ್ಲಿಯೂ ಪೂಜೆ ಸಲ್ಲಿಸಲಾಯಿತು.
ಇಲ್ಲಿ ಈಶ್ವರ ಲಿಂಗ, ಜೊತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿದೆ.
ಆಂಜನೇಯ ಶ್ರೀರಾಮರನ್ನು ಹೊತ್ತೊಯ್ದಿರುವ ಕುರುಹಾಗಿ ಇರುವ ದೊಡ್ಡ ಪಾದ ಆಂಜನೇಯನದ್ದು. ಆಟದ ವಿಚಾರ ಪಗಡೆ ಹಾಸಿನಿಂದ ತಿಳಿಯುತ್ತದೆ.
ವಿಶೇಷತೆಯುಳ್ಳ ಈ ಬಂಡೆ ಹೇಮಾವತಿ ಹಿನ್ನೀರು ಆವರಿಸುವುದರಿಂದ ಸಂಪೂರ್ಣ ಮುಚ್ಚಿ ಹೋಗುತ್ತದೆ. ಹೀಗಾಗಿ ಈ ಸ್ಥಳಕ್ಕೆ ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಬರುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.