ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಇರುವಿಕೆಯ ಕುರುಹುಗಳು ದೇಶದ ವಿವಿಧ ಸ್ಥಳಗಳಲ್ಲಿ ಸಿಗುತ್ತವೆ. ಹಾಗೆಯೇ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಗನೂರು ಸಮೀಪ ಶ್ರೀರಾಮಚಂದ್ರ ಸಂಚರಿಸಿದ್ದ ಪುರಾವೆಗಳು ಗೋಚರವಾಗಿವೆ.
ಹಾಸನ, ಡಿಸೆಂಬರ್ 29: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ.ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇವಸ್ಥಾನ ಗತವೈಭವದೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಇನ್ನು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಇರುವಿಕೆಯ ಕುರುಹುಗಳು ದೇಶದ ವಿವಿಧ ಸ್ಥಳಗಳಲ್ಲಿ ಸಿಗುತ್ತವೆ. ಹಾಗೆಯೇ ಹಾಸನ (Hassan) ಜಿಲ್ಲೆಯ ಆಲೂರು ತಾಲೂಕಿನ ಕಾಗನೂರು ಸಮೀಪ ಶ್ರೀರಾಮಚಂದ್ರ ಸಂಚರಿಸಿದ್ದ ಪುರಾವೆಗಳು ಗೋಚರವಾಗಿವೆ.ಹೌದು ಕಾಗನೂರು ಸಮೀಪದ ಹೇಮಾವತಿ ನದಿಯ ದಡದಲ್ಲಿರುವ ಬೃಹದಾಕಾರದ ಬಂಡೆಯ ಮೇಲೆ ಶ್ರೀರಾಮದ ಪಾದದ ಗುರುತು ಪತ್ತೆಯಾಗಿದೆ.
ಶ್ರೀರಾಮಚಂದ್ರನ ಪಾದುಕೆ ಮಾತ್ರವಲ್ಲದೇ ಆಂಜನೇಯ ಪಾದ ಹಾಗೂ ಶಿವಲಿಂಗ ಮೂರ್ತಿ ಕೂಡ ಗೋಚರವಾಗಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಸಾರ್ವಜನಿಕರು ರಾಮನ ಪಾದದ ದರ್ಶನ ಪಡೆಯುತ್ತಿದ್ದಾರೆ. ಇನ್ನು ಶ್ರೀರಾಮನ ಪಾದ ಗೋಚರವಾದ ಸ್ಥಳದಿಂದ ಅರ್ದ ಕಿಲೋಮೀಟರ್ ದೂರದಲ್ಲಿ ಆಂಜನೇಯನ ದೇವಸ್ಥಾನವಿದೆ.
ಬೃಹದಾಕಾರದ ಬಂಡೆಯ ಮೇಲಿನ ರಾಮನ ಪಾದಗಳಿಗೆ ಶತಮಾನಗಳಿಂದಲೂ ಪೂಜೆ ಪುನಸ್ಕಾರ ನಡೆಯುತ್ತಿತ್ತು. ಆದರೆ 70 ರ ದಶಕದಲ್ಲಿ ಈ ಸ್ಥಳದಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು.
ಹೀಗಾಗಿ ಈ ಬಂಡೆ ಮುಚ್ಚಿ ಹೋಗಿತ್ತು. ಈ ವರ್ಷ ಮಳೆ ಕಡಿಮೆ ಆದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರು ಕಡಿಮೆಯಾಗಿ ಮತ್ತೆ ಬಂಡೆ ಗೋಚರಿಸಿದಾಗ ಶ್ರೀರಾಮನ ಪಾದಗಳು ಗೋಚರವಾಗಿವೆ.
ಲಂಕಾಧೀಶ ರಾವಣನ ಸಂಹಾರದ ಬಳಿಕ ಬ್ರಹ್ಮ ಹತ್ಯೆ ದೋಷ ಪರಿಹಾರಕ್ಕಾಗಿ ಲೋಕ ಸಂಚಾರದಲ್ಲಿದ್ದ ರಾಮ ಲಕ್ಷ್ಮಣ ಸೀತೆಯರು ಪುಣ್ಯ ನದಿ ಹೇಮಾವತಿ ದಂಡೆಯಲ್ಲಿ ತಂಗಲು ತೀರ್ಮಾನಮಾನಿಸಿದರು.
ಹೀಗಾಗಿ ಬಂಡೆಯ ಮೇಲೆ ಈಶ್ವರ ಪ್ರತಿಷ್ಠಾಪನೆ ಮಾಡಿ ಶ್ರೀರಾಮಚಂದ್ರ ಪೂಜೆ ಮಾಡುವ ವೇಳೆ ಈ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ತಾಯಿಯನ್ನು ಕೈಯಲ್ಲಿ ಹಿಡಿದು ನದಿ ದಾಟುವ ದೃಶ್ಯ ಕಂಡರು. ಆಗ ಶ್ರೀರಾಮ ಇಲ್ಲಿ ನೆಲೆಸುವುದು ಬೇಡ ಅಂತ ಮುಂದೆ ಹೋದರಂತೆ. ಆಗ ರಾಮ ನಿಂತ, ನಡೆದಾಡಿದ ಸ್ಥಳಗಳಲ್ಲಿ ಪಾದಗಳು ಮೂಡಿವೆ ಎಂಬುವುದು ಜನರ ನಂಬಿಕೆಈ ಸ್ಥಳದಿಂದ 500 ಮೀಟರ್ ದೂರದಲ್ಲಿ ಹನುಮನ ದೇವಾಲಯ ಇದ್ದು ಈ ಸ್ಥಳಕ್ಕೆ ವಿಶೇಷ ಮಹತ್ವ ಬಂದಿದೆ. ದಶಕಗಳ ಬಳಿಕ ಮತ್ತೆ ಕಾಣಿಸಿಕೊಂಡಿರುವ ಈ ಪುಣ್ಯ ಸ್ಥಳವನ್ನು ದೇವಾಲಯ ಮಾಡಿ ನಿತ್ಯ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಭಕ್ತರ ಆಗ್ರಹಿಸಿದ್ದಾರೆ.
ಈ ಸ್ಥಳವನ್ನು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿರುವ ಜನರು ಶೀಘ್ರವೇ ಈ ಬಗ್ಗೆ ಸರ್ಕಾರ ಕ್ರಮವಹಿಸಲಿ ಎಂದಿದ್ದಾರೆ.