ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಹಾಸ್ಯನಟ ಶ್ಯಾಮ್ ರಂಗೀಲಾ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ನಾಮಪತ್ರಕ್ಕೆ ಅಗತ್ಯವಿದ್ದ ಅಪಿಢವಿಟ್ ಸಲ್ಲಿಸಲು ರಂಗೀಲಾ ವಿಫಲರಾಗಿದ್ದರಿಂದ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಸಮಿತಿಯ ವೆಬ್‌ಸೈಟ್ ಪ್ರಕಾರ, 55 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳ ಫಾರ್ಮ್‌ಗಳನ್ನು ತಿರಸ್ಕರಿಸಲಾಗಿದೆ.
ಪಿಎಂ ಮೋದಿ ಮತ್ತು ಕಾಂಗ್ರೆಸ್‌ನ ಅಜಯ್ ರೈ ಸೇರಿದಂತೆ 15 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಸ್ವೀಕರಿಸಲಾಗಿದೆ.ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶ್ಯಾಮ್ ರಂಗೀಲಾ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು.
ಇದಕ್ಕೆ ಮೊದಲು ನನಗೆ ನಾಮಪತ್ರ ಸಲ್ಲಿಸದಂತೆ ತಡೆಯಲಾಗುತ್ತಿದೆ. ಅಧಿಕಾರಿಗಳು ನಾಮಪತ್ರ ಸಲ್ಲಿಸಲು ಅರ್ಜಿ ಫಾರಂ ಕೊಡುತ್ತಿಲ್ಲ ಎಂದು ಹಾಸ್ಯನಟ ಶ್ಯಾಮ್ ರಂಗೀಲಾ ಆರೋಪಿಸಿದ್ದರು.
ಕೊನೆಗೆ ಮೇ.14ರಂದು ಶ್ಯಾಮ್ ರಂಗೀಲಾ ನಾಮಪತ್ರ ಸಲ್ಲಿಸಿದ್ದರು.ಶ್ಯಾಮ್ ರಂಗೀಲಾ ಮೇ.10ರಿಂದ ನಾಮಪತ್ರ ಸಲ್ಲಿಸಲು ಪ್ರಯತ್ನಿಸುತ್ತಿದ್ದರೂ, ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದ ದಿನ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ರಂಗೀಲಾ ಸುದ್ದಿಗಾರರಿಗೆ ತಿಳಿಸಿದ್ದರು.
ಒಂದು ಕಾಲದಲ್ಲಿ ಪ್ರಧಾನಿ ಮೋದಿಯ ಅನುಯಾಯಿಯಾಗಿದ್ದ ರಂಗೀಲಾ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ, ಅದಕ್ಕಾಗಿಯೇ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು.
2014ರಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಯಾಗಿದ್ದೆ. ನಾನು ಪ್ರಧಾನಿಯನ್ನು ಬೆಂಬಲಿಸುವ ಅನೇಕ ವೀಡಿಯೊಗಳನ್ನು ಹಂಚಿಕೊಂಡಿದ್ದೇನೆ. ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧವೂ ವೀಡಿಯೊಗಳನ್ನು ಹಂಚಿಕೊಂಡಿದ್ದೇನೆ. ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.
ಕಾಮಿಡಿ ಶೋನಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅನುಕರಿಸುವ ಮೂಲಕ ರಂಗೀಲಾ ಖ್ಯಾತಿ ಗಳಿಸಿದ್ದರು. ಮೂಲತಃ ರಾಜಸ್ಥಾನದ 29 ವರ್ಷದ ಶ್ಯಾಮ್ ರಂಗೀಲಾ 2022ರಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.
ವಾರಣಾಸಿಯಲ್ಲಿ 7ನೇ ಮತ್ತು ಅಂತಿಮ ಹಂತದಲ್ಲಿ ಜೂ.1ರಂದು ಮತದಾನ ನಡೆಯಲಿದ್ದು, ಜೂ.4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.