ಇತ್ತೀಚೆಗಷ್ಟೇ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಾಗಿ ಆರ್‌ಬಿಐ ಆದೇಶ ಹೊರಡಿಸಿದೆ. ಹಾಗೆಯೆ ಈ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿ, ಬೇರೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೂ ಸಮಯಾವಕಾಶವನ್ನು ನೀಡಿದೆ.ಅಲ್ಲದೆ ಜನರು ನೋಟುಗಳನ್ನು ತಂದಾಗ ಅಂಗಡಿ ಮಾಲೀಕರು ತಿರಸ್ಕಾರ ಮಾಡುವಂತಿಲ್ಲ ಅಂತಲೂ ತಿಳಿಸಿದೆ. ಆದರೆ ರೈತರು ತಂದತಹ 2,000 ರೂ. ಮುಖಬೆಲೆಯ ನೋಟುಗಳನ್ನು ಗೊಬ್ಬರದ ಅಂಗಡಿಯವರು ತಿರಸ್ಕರಿಸಿದ ಘಟನೆ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ನಡೆದಿದೆ.2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವುದಾಗಿ ಹೇಳಿದಾಗಿನಿಂದ ಅಂಗಡಿ, ಮಾರುಕಟ್ಟೆಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈ ನೋಟುಗಳ್ನು ಜನರಿಂದ ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಇದರಿಂದ ಜನರು ಕೂಡ ಬೇಸತ್ತು ಅಂಗಡಿ ಮಾಲೀಕರ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ.ಅದೇ ರೀತಿ ಇಂದು ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯ ರಸಗೊಬ್ಬರ ಖರೀದಿ ಕೇಂದ್ರದಲ್ಲಿ ಗೊಬ್ಬರ ಖರೀದಿಸಿದ ರೈತರೊಬ್ಬರು ಕ್ಯಾಷಿಯರ್‌ಗೆ ಎರಡು ಸಾವಿರ ನೋಟ್ ನೀಡಿದ್ದಾರೆ. ಆದರೆ ಗೊಬ್ಬರದ ಅಂಗಡಿ ಕ್ಯಾಷಿಯರ್ ಮಾತ್ರ 2,000 ರೂ. ಮುಖಬೆಲೆಯ ನೋಟ್ ಅನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ರಸಗೊಬ್ಬರ ಅಂಗಡಿಯ ಕ್ಯಾಶಿಯರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.ಇದೇ ವೇಳೆ ರಸಗೊಬ್ಬರ ಕೊಳ್ಳಲು ಬಂದ ರೈತ ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದಿದೆ. 2,000 ರೂ. ಏಕೆ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದ ರೈತನಿಗೆ ಕ್ಯಾಷಿಯರ್ ಮ್ಯಾನೇಜರ್ ಬಳಿ ಹೋಗು ಎಂದಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ರೈತನ ಮೇಲೆ ಕ್ಯಾಶಿಯರ್ ಹಲ್ಲೆಗೆ ಮುಂದಾದ ಘಟನೆ ನಡೆದಿದ್ದು, ಈ ಹಲ್ಲೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.