
ಸಕಲೇಶಪುರ : ಸೇವೆ ಮಾಡುವುದರ ಮೂಲಕ ಮನೆ ಮನಗಳಲ್ಲೂ ನಮ್ಮನ್ನು ನೆನೆಯುವಂತೆ ಮಾಡುವ ಮಹತ್ವಕಾಂಕ್ಷೆಯೊಂದಿಗೆ ಸೇವೆ ಮಾಡಬೇಕೆ ವಿನಃ ಕೇವಲ ಪ್ರಚಾರಗಿಟ್ಟಿಸಲು ಅಲ್ಲ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ ಪುತ್ತೂರಾಯರು ಹೇಳಿದರು.
ಬೇಲೂರು ತಾಲೂಕು ಅರೇಹಳ್ಳಿ ಲಯನ್ಸ್ ಕ್ಲಬ್‌ನ ನೇತೃತ್ವದಲ್ಲಿ ಸಕಲೇಶಪುರದ ಸೀನಪ್ಪ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡ ಪ್ರಾಂತ್ಯ ೮ರ ತನ್ವಿ ಪ್ರಾಂತೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೇವೆ ಮಾಡುವುದರಿಂದ ಬದುಕಿಗೊಂದು ಅರ್ಥ ಬರುತ್ತದೆ. ನಿಷ್ಕಲ್ಮಷ ಮನಸ್ಸಿನಿಂದ ಸೇವೆ ಮಾಡುವುದರಿಂದ ಸಂತೃಪ್ತಿ ದೊರೆಯುತ್ತದೆ. ಹಣವಿದ್ದ ಮಾತ್ರಕ್ಕೆ ನೆಮ್ಮದಿ, ಶಾಂತಿ ದೊರೆಯುವುದಿಲ್ಲ. ಹಣದ ಜೊತೆ ಸಮಾಜದ ಬಗ್ಗೆ ಅರಿವಿದ್ದಾಗ ಮಾತ್ರ ಹಣಕ್ಕೊಂದು ಮೌಲ್ಯ ದೊರೆಯುತ್ತದೆ ಎಂದರು.
ಪ್ರಾಂತೀಯ ಅಧ್ಯಕ್ಷ ಲ.ರಾಬಿ ಸೋಮಯ್ಯ ಮಾತನಾಡಿ, ಸೇವೆ ಮಾಡುವ ಉದ್ದೇಶದಿಂದ ನಾನು ಲಯನ್ಸ್ ಸಂಸ್ಥೆಯನ್ನು ಸೇರಿ ಹಲವಾರು ಸಮಾಜ ಮುಖಿ ಕಾರ‍್ಯಗಳನ್ನು ಮಾಡಲು ಸಾಧ್ಯವಾಗಿದೆ. ೮ ಕ್ಲಬ್‌ಗಳು ಪ್ರತಿ ವರ್ಷ ಒಂದೊಂದು ಯೋಜನೆಗಳನ್ನು ರೂಪಿಸಿಕೊಂಡು ಆ ಯೋಜನೆಗಳು ಕಾರ‍್ಯ ರೂಪಕ್ಕೆ ತರುವಲ್ಲಿ ನಮ್ಮ ಸಂಸ್ಥೆಯು ಯಶಸ್ಸನ್ನು ಕಾಣುತ್ತಿದೆ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಈ ಸಂಸ್ಥೆಯು ಕುಟುಂಬ ಕುಟುಂಬಗಳ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಿರುವಷ್ಟು ಅನ್ಯ ಕೆಲಸಗಳಲ್ಲಿ ಮಗ್ನರಾಗಿರುವಾಗ ಲಯನ್ಸ್ ಸಂಸ್ಥೆ ಆಯೋಜನೆ ಮಾಡುವ ಕಾರ‍್ಯಕ್ರಮಗಳಿಂದ ಎಲ್ಲಾರೂ ಒಟ್ಟಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಪ್ರಾಂತ್ಯದ ಪ್ರಥಮ ಮಹಿಳೆ ಲ.ರಶ್ಮಿ ಸೋಮಯ್ಯ, ಪಿಡಿಜಿ ಲ.ಸಂಜೀತ್ ಶೆಟ್ಟಿ, ಸಮ್ಮೇಳನ ಸಮಿತಿ ಅಧ್ಯಕ್ಷ ಲ.ಚಾಮರಾಜ್, ಕಾರ‍್ಯದರ್ಶಿ ಲ. ಸಂತೋಷ್ ಕುಮಾರ್, ಖಜಾಂಚಿ ಲ.ಸತೀಶ್, ಮುಖ್ಯ ಸಲಹೆಗಾರರಾದ ಲ.ದಯಾನಂದ ಶೆಟ್ಟಿ, .ಬಿ.ವಿ ಹೆಗಡೆ, ಅರೇಹಳ್ಳಿ ಕ್ಲಬ್ ಅಧ್ಯಕ್ಷ ಲ.ಸಂತೋಷ್ ಕುಮಾರ್ ಕೆ.ಎನ್, ಕಾರ‍್ಯದರ್ಶಿ ಪೃಥ್ವಿರಾಜ್ ಎಂ.ಎ, ಖಜಾಂಚಿ ಬೃಂದನ್ ಹೆಚ್.ಎಸ್, ಝಡ್‌ಸಿ ಅಬ್ದುಲ್ ಲತೀಫ್, ರಘು ಪಾಳ್ಯ, ಪ್ರಾಂತೀಯ ರಾಯಭಾರಿ ವಿಠ್ಠಲ್, ರಮೇಶ್, ಪೂವಯ್ಯ ಹಾಗೂ ಲಯನ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು..