
ಆಲೂರು : ನವ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ” ಉತ್ತಮ ಆರೋಗ್ಯ ” ಬಹಳ ಮುಖ್ಯ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಕಣತೂರು ಗ್ರಾಮದಲ್ಲಿ ಸಾರ್ವಜನಿಕ ಆರೋಗ್ಯ ಉಪ ಕೇಂದ್ರ ಹಾಗೂ ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಭೂಮಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ಈ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆಯ ಅವಶ್ಯಕತೆ ಇರುವುದನ್ನು ಮನಗಂಡು, ಬಹು ನಿರೀಕ್ಷಿತ ತುರ್ತು ಆರೋಗ್ಯ ಚಿಕಿತ್ಸಾ ಸೌಲಭ್ಯ ಇಲ್ಲೇ ದೊರೆಯು ವಂತಾಗುತ್ತಿದೆ. ತ್ವರಿತವಾಗಿ ಗುಣಮಟ್ಟದ ಕಟ್ಟಡವನ್ನು ನಿರ್ಮಾಣ ಮಾಡಿ ಈ ಭಾಗದ ಜನರಿಗೆ ಮನೆ ಬಾಗಿಲಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಣತೂರು ಗ್ರಾ ಪಂ ಅಧ್ಯಕ್ಷ ಪೃಥ್ವಿ ಜಯರಾಮ್ ಮಾತನಾಡಿ ಈ ಭಾಗದ ಜನರ ದಶಕಗಳ ಬೇಡಿಕೆಯನ್ನು ಈಡೇರಿಸಿದ ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಪಂಚಾಯಿತಿ ವ್ಯಾಪ್ತಿಯ ಶ್ರೀಸಾಮಾನ್ಯರ ಪರವಾಗಿ ಧನ್ಯವಾದಗಳು ಅರ್ಪಿಸಿದ ಅವರು, ನಮ್ಮ ಪಂಚಾಯತಿ ವ್ಯಾಪ್ತಿಯ ಜನರು ಆರೋಗ್ಯ ಸೇವೆಗೆ ಆಲೂರು ಪಟ್ಟಣದ ತಾಲೂಕು ಆಸ್ಪತ್ರೆಗೆ ಹೋಗಬೇಕಾಗಿತ್ತು, ಆದರೆ ಇಗ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಉಪ ಕೇಂದ್ರದ ಕಾಮಗಾರಿ ಬೇಗ ಮುಗಿದು ಸ್ಥಳೀಯ ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಲಿ ಹಾಗೂ ದಶಕಗಳಿಂದ ಉಪ ಆರೋಗ್ಯ ಕೇಂದ್ರಕ್ಕಾಗಿ ಹೋರಾಡಿದ ಈ ಭಾಗದ ಸ್ಥಳೀಯ ಮುಖಂಡರ ಶ್ರಮವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಪುರುಷೋತ್ತಮ್ ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗರಾಜು, ಜಗದೀಶ್, ಕೃಷ್ಣೇಗೌಡ, ಡೇಗರಾಜು, ನಿರ್ವಾಣಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ ನಿಸಾರ್ ಫಾತಿಮಾ. ತಾಲೂಕು ಆಸ್ಪತ್ರೆ ಮುಖ್ಯ ವೈಧ್ಯಾದಿಕಾರಿ ಡಾ ಜಯಪ್ರಕಾಶ್, ಹಿರಿಯ ಆರೋಗ್ಯ ನೀರಿಕ್ಷಕ ಸತೀಶ್, ಇಂಜಿನಿಯರ್ ನರೇಂದ್ರ, ಗ್ರಾ ಪಂ ಸಿಬ್ಬಂದಿಗಳು ಸೇರಿದಂತೆ ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.