ಆಲೂರು: ರಾಷ್ಟ್ರೀಯ ಹೆದ್ದಾರಿಯಿಂದ ಆಲೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತಿರುವು ರಸ್ತೆಯಲ್ಲಿ, ನೇರಲಕೆರೆ ಕೂಡಿಗೆ ಬಳಿ ಆಳವಾದ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಸಂಬಂಧಿಸಿದ ಇಲಾಖೆ ಕೂಡಲೇ ಸರಿಪಡಿಸದಿದ್ದರೆ ಇಲಾಖೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಜನರು ಚಿಂತನೆ ನಡೆಸಿದ್ದಾರೆ.
ಬೇಲೂರು, ಬಿಕ್ಕೋಡು, ಸಕಲೇಶಪುರದ ಕಡೆಗೆ ಚಲಿಸುವ ಎಲ್ಲ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ಸಿಮೆಂಟ್ ರಸ್ತೆ ಮಾಡಲಾಗಿದೆ. ಆಲೂರಿನಿಂದ ರಾಷ್ಟ್ರೀಯ ಹೆದ್ದಾರಿ ಸಿಮೆಂಟ್ ರಸ್ತೆಗೆ ಹೋಗುವ ಮುನ್ನ ಹತ್ತಾರು ಗುಂಡಿಗಳನ್ನು ದಾಟಿ ಹೋಗಬೇಕು. ಅಡಿ ಆಳದ ಗುಂಡಿಗಳನ್ನು ದಾಟುವ ಸಂದರ್ಭದಲ್ಲಿ ಹಲವು ವಾಹನಗಳು ಪಂಕ್ಚರ್ ಆಗುವುದಲ್ಲದೇ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ದ್ವಿಚಕ್ರ ವಾಹನಗಳ ಪಾಡು ಹೇಳತೀರದಾಗಿದೆ.
ಹೆದ್ದಾರಿಯಿಂದ ಆಲೂರಿಗೆ ತಿರುವು ಪಡೆದುಕೊಳ್ಳಲು ಚಾಲಕರಿಗೆ ಸರಿಯಾಗಿ ಕಾಣುವಂತೆ ಯಾವುದೇ ಸೂಚನಾ ಫಲಕವಿಲ್ಲ. ವಾಹನಗಳು ಆಲೂರಿಗೆ ತಿರುವು ಪಡೆದುಕೊಳ್ಳುವ ಸಮಯದಲ್ಲಿ ಸಕಲೇಶಪುರ ಮತ್ತು ಹಾಸನ ಕಡೆಯಿಂದ ಓಡಾಡುವ ವಾಹನಗಳ ಚಾಲಕರಿಗೆ ಕಿರಿಕಿರಿ ಉಂಟಾಗಿ, ಕೆಲ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಮಳೆಗಾಲ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ದಿನದಿಂದ ದಿನಕ್ಕೆ ಗುಂಡಿಗಳು ಆಳ ಮತ್ತು ಅಗಲವಾಗುತ್ತಿವೆ.ಕೇವಲ 100 ಮೀ. ಉದ್ದದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸರಿಪಡಿಸಿಲ್ಲ.
ಈ ಮೂಲಕ ವಾಹನಗಳು ಮತ್ತು ಜನಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಪಘಾತಗಳು ಸಂಭವಿಸಿದಾಗ ಹೆದ್ದಾರಿ ಇಲಾಖೆ ವಿರುದ್ಧ ವಾಹನಗಳ ವಾರಸುದಾರರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಇಲಾಖೆ ಸಿಬ್ಬಂದಿ ಅಲೆದಾಡಿಸಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಕೂಡಲೇ ರಸ್ತೆಗಳ ಗುಂಡಿಗಳನ್ನು ಮುಚ್ಚಿ, ಡಾಂಬರೀಕರಣ ಮಾಡಿ ವಾಹನಗಳ ಸುರಕ್ಷತೆ ಕಾಪಾಡಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.