ರಾಯಚೂರು: ತಾಲೂಕಿನ ವಡ್ಲೂರು ಗ್ರಾಮದಲ್ಲಿ ಮಗನಿಂದಲೇ ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನಲ್ಲಿ ಹೂತಿಟ್ಟಿದ್ದ ಶವವನ್ನು 13 ದಿನಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆ (Postmortem) ಮಾಡಲಾಗಿದೆ. ಜಿಟಿ ಜಿಟಿ ಮಳೆಯಲ್ಲೇ ರಾಯಚೂರು (Raichur) ಎಸಿ ಮೆಹಬೂಬಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಜುಲೈ 7 ರಂದು ವಡ್ಲೂರು (Vadlur) ಗ್ರಾಮದಲ್ಲಿ 70 ವರ್ಷದ ಶಿವನಪ್ಪ ಕೊಲೆಯಾಗಿದ್ದು, ಪ್ರಕರಣದ ಆರೋಪಿ ಈರಣ್ಣ ಜುಲೈ 19 ರಂದು ಪೊಲೀಸರಿಗೆ ಶರಣಾದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಭಾರತ ಮಾಲಾ ಯೋಜನೆ ಹೈವೆಗೆ ಜಮೀನು ಹೋಗಿದ್ದು, ಭೂಸ್ವಾಧೀನ ಪರಿಹಾರ ಹಣಕ್ಕಾಗಿ ತಂದೆ-ಮಗನ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ತಂದೆಯ ಕೊಲೆ ಬಳಿಕ ವಡ್ಲೂರು ಗ್ರಾಮದ ಹೈವೆ ಪಕ್ಕದಲ್ಲಿ ಈರಣ್ಣ ತಾಯಿ ರಂಗಮ್ಮ ಜೊತೆಗೂಡಿ ಶವವನ್ನು ಹೂತಿಟ್ಟಿದ್ದ. ಬಳಿಕ ತಂದೆ ಕಾಣೆಯಾಗಿದ್ದಾರೆ ಎಂದು ಗ್ರಾಮದಲ್ಲಿ ಹೇಳಿಕೊಂಡು ಬಂದಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ತಂದೆ ಕಾಣೆಯಾಗಿದ್ದಾರೆ ಎಂದು ದೂರು ಕೊಡಲು ಬಂದರೂ ಧೈರ್ಯ ಸಾಲದೆ ವಾಪಸ್ ತೆರಳಿದ್ದ.
ಆದರೆ ಈರಣ್ಣನ ವರ್ತನೆ ಮೇಲೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಅನುಮಾನಗೊಂಡಿದ್ದರು. ಇದಕ್ಕೆ ಹೆದರಿ ಆರೋಪಿ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆ ಮಳೆಯಲ್ಲೇ ಶವ ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತನ ಕುಟುಂಬಸ್ಥರು ಅದೇ ಹೊಲದಲ್ಲಿ ಶಿವನಪ್ಪ ಅಂತ್ಯಸಂಸ್ಕಾರ ಮಾಡಿದ್ದಾರೆ.
ಈ ಬಗ್ಗೆ ರಾಯಚೂರು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಮರುದಿನವೇ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಾಯಿ ಹಾಗೂ ಮಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.