ರಾಜ್ಯದಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಅಂತ್ಯೋದಯ, ಆದ್ಯತಾ ಪಡಿತರ ಚೀಟಿ ವಿತರಿಸಲಾಗಿದ್ದು, ಆ ಹಿನ್ನೆಲೆಯಲ್ಲಿ ಹೊಸದಾಗಿ ಪಡಿತರ ಚೀಟಿ ವಿತರಣೆಗೆ ಆರ್ಥಿಕ ಇಲಾಖೆ ಜತೆಗೆ ಸಮಾಲೋಚಿಸಿ ಅನಂತರ ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, ಸದ್ಯ ರಾಜ್ಯದಲ್ಲಿ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಪೈಕಿ 2.95 ಲಕ್ಷ ಅರ್ಜಿಗಳ ವಿಲೇವಾರಿ ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 14.36 ಲಕ್ಷ ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿಸಲಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕಾರ್ಡ್ ನೀಡುವ ಅವಕಾಶವಿಲ್ಲ. ಆದರೂ, ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.
ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆ ಅನ್ವಯ ನಗರ ಪ್ರದೇಶದಲ್ಲಿ ಶೇ.50ರಷ್ಟುಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.75ರಷ್ಟುವಾಸಿಗಳು ಅಂತ್ಯೋದಯ ಅನ್ನ ಯೋಜನೆ ಅಥವಾ ಆದ್ಯತಾ ಪಡಿತರ ಚೀಟಿಯನ್ನು ಹೊಂದಲು ಅರ್ಹರಿರುತ್ತಾರೆ. ರಾಜ್ಯದಲ್ಲಿ ಒಟ್ಟು 10.90 ಲಕ್ಷ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ವಿತರಿಸಲಾಗಿದ್ದು, ಇದರಲ್ಲಿ 44,77,231 ಫಲಾನುಭವಿಗಳಿದ್ದಾರೆ. 1.02 ಕೋಟಿ ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, ಇದರಲ್ಲಿ 3.57 ಕೋಟಿ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಮತ್ತು ವೃತ್ತಿ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರನ್ನು ಪತ್ತೆಹಚ್ಚಿ ಅವರಿಗೆ ನೀಡಲಾಗಿರುವ ಆದ್ಯತಾ ಪಡಿತರ ಚೀತಿಯನ್ನು ಆದ್ಯತೇತರ ಪಡಿತರ ಚೀಟಿಗಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೆ, ಅನರ್ಹರಿಂದ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.