ಮದ್ಯ ಪ್ರಿಯರಿಗೆ ವಿಮೆ, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಯೋಜನೆ ಜಾರಿಗೆ ಸಿ ಎಂ ಗೆ ಮನವಿ……
ಮದ್ಯಪಾನ ಪ್ರಿಯರ ಸಂಘುದ ರಾಜ್ಯ ಅಧ್ಯಕ್ಷ ಬೋರೇಹಳ್ಳಿ ವೆಂಕಟೇಶ್ ಹೇಳಿಕೆ…..
ಮದ್ಯ ಸೇವನೆಯಿಂದ ವಿವಿಧ ರೋಗಗಳಿಗೆ ಮದ್ಯಪಾನ ಪ್ರಿಯರು ತುತ್ತಾಗುತ್ತಿದ್ದು, ಅವರಿಗೆ ವಿಮೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡುವ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.
ರಾಜ್ಯ ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ ಬೋರೇಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಅನೇಕ ತಾಲೂಕುಗಳ ಸದಸ್ಯರು ಬೆಂಗಳೂರಿಗೆ ನಿಯೋಗ ತೆರಳಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.
ರಾಜ್ಯದಲ್ಲಿ ಮದ್ಯಪಾನ ಪ್ರಿಯರು ಮದ್ಯ ಸೇವನೆಯಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಿಮೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಲು ಯೋಜನೆ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದಾರೆ.
ಅರಸೀಕೆರೆಯಲ್ಲಿ ಮಾತನಾಡಿದ ರಾಜ್ಯ ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ ಬೋರೇಹಳ್ಳಿ ವೆಂಕಟೇಶ್ ಅವರು, ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 36,000 ಕೋಟಿ ರೂ. ಆದಾಯ ಬರುತ್ತಿದ್ದು, ಇದರಲ್ಲಿ ಶೇಕಡ 20ರಷ್ಟು ಮೊತ್ತವನ್ನು ಮದ್ಯಪ್ರಿಯರ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.
ಮದ್ಯವಸನಿಗಳ ಕುಟುಂಬದ ಪರಿಸ್ಥಿತಿ ಮತ್ತು ಮದ್ಯವಸನಿಗಳ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಪರಿಹಾರಕ್ಕೆ ಆರ್ಥಿಕ ಭದ್ರತೆ, ವಿಮೆ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವೇ ಮದ್ಯ ಮಾರಾಟ ನಡೆಸುತ್ತಿದ್ದು, ಕಾರ್ಮಿಕರು, ಶ್ರಮಿಕರು ಸೇರಿದಂತೆ ಜಾತಿಭೇದವಿಲ್ಲದೆ ಬಹುತೇಕ ಸಮುದಾಯದವರು ಮದ್ಯಪಾನ ಮಾಡುತ್ತಾರೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ಬರುತ್ತದೆ.
ಈ ಹಣದಿಂದ ಅನೇಕ ಯೋಜನೆಗಳಿಗೆ ಹಣ ವಿನಿಯೋಗ ಮಾಡಲಾಗುತ್ತದೆ. ಅದೇ ರೀತಿ ಮದ್ಯ ವ್ಯಸನಿಗಳಿಗೂ ಈ ಹಣ ಮೀಸಲಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.