ಹಾಸನ : ಜುಲೈ, 23: ಎದುರು ಬಂದ ಲಾರಿಗೆ ಜಾಗ ಬಿಡಲು ಹೋಗಿ ಸಾರಿಗೆ ಬಸ್‌ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ನ ಹಿಂಬದಿಯ ಕಿಟಕಿ ಪಕ್ಕ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ನಿಡಗೋಡು ಗ್ರಾಮದ ಬಳಿ ನಡೆದಿದೆ.
ಹಾಸನದಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಾರಿಗೆ ಬಸ್ ಬೇಲೂರಿನ ನಿಡಗೋಡು ಗ್ರಾಮದ ಬಳಿ ಎದುರು ಬಂದ ಲಾರಿಗೆ ಜಾಗ ಬಿಡಲು ಎಡ ಬದಿಗೆ ಬಂದಿದೆ.
ಈ ವೇಳೆ ಎಡದಲ್ಲಿದ್ದ ಮರಕ್ಕೆ ಹಿಂಬದಿಯಿಂದ ಬಸ್ ಹೊಡೆದಿದ್ದು, ಬಸ್‌ನ ಕಿಟಕಿ ಪಕ್ಕ ಕುಳಿತಿದ್ದ ಪ್ರಯಾಣಿಕನಿಗೆ ಮರ ತಗುಲಿ ಗಂಭೀರ ಗಾಯವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಪ್ರಕರಣ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಸಾವಿಗೀಡಾದ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆ ಪಕ್ಕದಲ್ಲೇ ಮರಗಳು ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗುವುದಲ್ಲದೆ, ಅಪಘಾತಗಳು ಕೂಡ ಸಂಭವಿಸುತ್ತಿವೆ. ಈ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಮರ ತೆರವುಗೊಳಿಸಿಲ್ಲ. ಶೀಘ್ರವೇ ರಸ್ತೆಗೆ ಹತ್ತಿರವಿರುವ ಮರಗಳನ್ನು ತೆರವುಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.