ಬೇಲೂರು : ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಬಿಟ್ಟುಬಿಡದೇ ಸುರಿಯುತ್ತಿದ್ದ ಮಳೆಯ ನಡುವೆ ಕರೆಂಟ್ ಇರದಿದ್ದ ವೇಳೆ ಗ್ರಾಮದೊಳಗೆ ನುಗ್ಗಿದ ಕಾಡಾನೆಗಳ ಗುಂಪು ದಾಂಧಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಹೋಬಳಿಯ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಈ ವೇಳೆ ವಿಶ್ವನಾಥ್ ಮಾತನಾಡಿ ನಿರಂತರ ಆನೆಗಳ ದಾಳಿಯಿಂದ ತತ್ತರಿಸಿರುವ ಗ್ರಾಮಸ್ಥರು ಆನೆಗಳು ಮನೆಯ ಒಳಭಾಗಕ್ಕೆ ಬರುತ್ತಿರುವ ಪರಿಣಾಮ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಆನೆಗಳು ಊರಿಗೆ ಬಂದ ವೇಳೆ ಕರೆಂಟ್ ಕೈಕೊಟ್ಟಿತ್ತು ಒಂದು ವೇಳೆ ಕರೆಂಟ್ ಇದ್ದಿದ್ದರೆ ಬೆಳಕಿಗೆ ಹೆದರಿ ಕಾಡಾನೆಗಳು ಬರದಿರುವ ಸಾಧ್ಯತೆ ದಟ್ಟವಾಗಿತ್ತು. ಆದ್ದರಿಂದ ಹಗಲಿನಲ್ಲಿ ಇಲ್ಲದಿದ್ದರೂ ರಾತ್ರಿ ವೇಳೆ ವಿದ್ಯುತ್ತನ್ನು ತಡೆರಹಿತವಾಗಿ ನೀಡಬೇಕು. ರಾತ್ರಿ ಮಲಗಿದ್ದ ವೇಳೆ ಮನೆಯ ಬಾಗಿಲನ್ನು ಸೊಂಡಿಲಿನಿಂದ ನೂಕಿದ್ದರೂ ಸಹ ತೆರೆಯಲಿಲ್ಲ. ಒಂದು ವೇಳೆ ಆನೆಗಳಿಂದ ಜೀವಕ್ಕೆ ಆಪತ್ತು ಬಂದೊದಗಿದ್ದರೆ ಯಾರುಹೊಣೆ ಹೊತ್ತುಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದರು.
ವಸಂತರವರು ಮಾತನಾಡಿ ರಾತ್ರಿ ಮಲಗಿದ್ದ ವೇಳೆ ಏಕಾಏಕಿ ಕಾಡಾನೆ ಬಂದು ಮನೆಯ ಬಳಿ ನಿಲ್ಲಿಸಿದ್ದ ದ್ವಿಚಕ್ರವನ್ನು ಬೀಳಿಸಿ ಹಾನಿ ಮಾಡಿದೆ. ಅರಣ್ಯ ಇಲಾಖೆಯವರು ನನಗಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಎಂದರು. ಗ್ರಾಮದ ವೃದ್ಧ ಮಹಿಳೆ ಸುಶೀಲಮ್ಮನವರ ಮಾತನಾಡಿ, ಮನೆಯ ಬಳಿ ಮೂರು ಕಾಡಾನೆಗಳು ಬಂದಿದ್ದು ಮುಂಭಾಗದಲ್ಲಿ ಬಟ್ಟೆ ಒಣಹಾಕಿದ್ದ ಹಗ್ಗವನ್ನು ಕಿತ್ತ ಮರಿಯಾನೆ ಬಟ್ಟೆಗಳೆಲ್ಲವನ್ನು ಕೆಳಗೆ ಬೀಳಿಸಿದೆ. ಹೀಗೆ ಆನೆಗಳು ಗ್ರಾಮದೊಳಗೆ ಬಂದರೆ ಓಡಾಡಲು ಭಯವಾಗುತ್ತದೆ ಎಂದರು.