ಅರಸೀಕೆರೆ : ತಾಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮ ಪಂಚಾಯಿತಿಯ ಚಿಕ್ಕಯರಗನಾಳು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಪ್ರಯುಕ್ತ ಜೋಳದಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾತನಾಡಿ ಮುಸುಕಿನ ಜೋಳಕ್ಕೆ ಸೂಕ್ತವಾದ ಮಣ್ಣು,ತಾಪಮಾನ, ಬಿತ್ತನೆ ಬೀಜದ ಪ್ರಮಾಣ, ಬೆಳೆಯ ಅಂತರ, ನೀರಾವರಿ,ಅಂತರ ಬೇಸಾಯ, ಜೋಳದ ಸುಧಾರಿತ ತಳಿಗಳು ಮತ್ತು ಇಳುವರಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು.
ಮುಂದುವರೆದು ಜೋಳದಲ್ಲಿ ಕಂಡುಬರುವ ಪ್ರಮುಖ ಕೀಟಗಳು,ಬಾಧೆಯ ಲಕ್ಷಣಗಳು ಮತ್ತು ಸಮಗ್ರ ಕೀಟ ನಿರ್ವಹಣೆ ಅಂದರೆ ಸಾಗೋಳಿ ಕ್ರಮ, ಯಾಂತ್ರಿಕ ಕ್ರಮ, ಜೈವಿಕ ನಿಯಂತ್ರಣ ಕ್ರಮ ಹಾಗೂ ರಾಸಾಯನಿಕ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ.ಸುನಿತಾ.ಟಿ.ಆರ್, ಸಹಾಯಕ ಪ್ರಾಧ್ಯಾಪಕರು, ಕೀಟಶಾಸ್ತ್ರ ವಿಭಾಗ,ಕೃಷಿ ಮಹಾವಿದ್ಯಾಲಯ ಹಾಸನ, ಇವರು ಮಾತನಾಡಿ ರೈತರು ಇದೇ ರೀತಿ ರಾಸಾಯನಿಕ ಕೀಟನಾಶಕಗಳನ್ನು ಬಳಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕೀಟ ನಿರ್ವಹಣೆ ಕಷ್ಟಕರವೆಂದು,ಅದಕ್ಕಾಗಿ ಸಮಗ್ರ ಕೀಟ ನಿರ್ವಹಣೆಯನ್ನು ಎಲ್ಲಾ ರೈತರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ರೈತರು ಈ ಗ್ರಾಮದಲ್ಲಿ ಜೋಳವು ಪ್ರಮುಖ ಬೆಳೆಯಾಗಿದ್ದು, ಸಮಗ್ರ ಕೀಟ ನಿರ್ವಹಣೆಯನ್ನು ತಿಳಿಸಿದ್ದಕ್ಕಾಗಿ ಕೃತಜ್ಞತೆಯನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರು,ರೈತರು ಮತ್ತು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.