
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು, ರಾಜ್ಯ ಸರಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
ಮೃತ ಬಾಲಕಿಯ ತಂದೆ ಧರ್ಮಸ್ಥಳದ ಪಾಂಗಳದ ನಿವಾಸಿ ಚಂದಪ್ಪ ಗೌಡ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದ್ದು, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ, ದಕ್ಷಿಣಕನ್ನಡ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ, ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬಿಐಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ವಿಚಾರಣೆಯ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಎಂ ಆರ್ ಬಾಲಕೃಷ್ಣ ವಾದ ಮಂಡಿಸಿದ್ದರು.ಪ್ರಕರಣದಿಂದ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ.
ಮೇಲ್ಮನವಿಯ ಜೊತೆಗೆ ಈ ಅರ್ಜಿಯನ್ನೂ ವಿಚಾರಣೆಗೆ ನಿಗದಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದರು. ಈ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕಳೆದ ಎಂಟು ತಿಂಗಳಿನಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ.
2012ರ ಅ.9ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್ ರಾವ್‌ನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಸಿಐಡಿ ತನಿಖೆ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು.
ಸಿಬಿಐ ಈ ಕುರಿತು ತನಿಖೆಯನ್ನು ಪೂರ್ಣಗೊಳಿಸಿ ಸಂತೋಷ್ ರಾವ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂತೋಷ್ ರಾವ್ ನಿರಪರಾಧಿ, ಆತನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎಂದು ಜೂನ್ 16ರಂದು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಸೂಕ್ತ ಸಮಯದಲ್ಲಿ ತನಿಖೆಯು ಸೂಕ್ತವಾಗಿ ನಡೆಸಿಲ್ಲ ಎಂದು ಹೇಳಿತ್ತು. ಇದರಿಂದ ಇಡೀ ತನಿಖೆ ನ್ಯಾಯೋಚಿತವಾಗಿ ನಡೆದಿಲ್ಲ ಎಂದು ಮರು ತನಿಖೆಗೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಲಾಗಿತ್ತು.