ಹಾಸನ : ಲೋಕಸಭಾ ಚುನಾವಣೆ ಮುಗಿದು ಈಗಾಗಲೇ ಮತ ಯಂತ್ರಗಳನ್ನು ಭದ್ರವಾಗಿ ಇಂಜಿನಿಯರಿಂಗ್ ಕಾಲೇಜಿನ ಕೊಠಡಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, ಜೂನ್ ೪ ರಂದು ಮತ ಏಣಿಕೆ ನಡೆಯಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ. ಸತ್ಯಾಭಾಮ ಅವರು ಮಾಹಿತಿ ನೀಡಿದರು.

ತಮ್ಮ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಲೋಕಸಭಾ ಚುನಾವಣೆಯ ಮತದಾನದ ನಂತರ ಮತ ಯಂತ್ರಗಳನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಡೈರಿ ವೃತ್ತ, ಹಾಸನ ಇಲ್ಲಿ ಭದ್ರತೆಗಾಗಿ ಮೊಹರು ಮಾಡಿದ ಕೊಠಡಿಯಲ್ಲಿ ಶೇಖರಿಸಿಡಲಾಗಿದೆ.

೨೦೨೪ ಜೂನ್ ೪ ರಂದು ಬೆಳಗ್ಗೆ ಸಾಮಾನ್ಯ ವೀಕ್ಷಕರು ಮತ್ತು ಹಾಜರಿದ್ದ ಅಭ್ಯರ್ಥಿಗಳ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ಬೆಳಗ್ಗೆ ೭ ಗಂಟೆಗೆ ತೆರೆಯಲಾಗುವುದು. ಬೆಳಗ್ಗೆ ೮ ಗಂಟೆಯಿಂದ ಅಂಚೆ ಮತ ಪತ್ರಗಳ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳಿಂದ ಎಣಿಕೆ ಕಾರ್ಯವನ್ನು ಪ್ರಾರಂಭಿಸಲಾಗುವುದು.

ಪ್ರತಿ ಸುತ್ತುವಾರು, ರೌಂಡ್‌ವೈಸ್ ಮತ ಎಣಿಕೆ ವಿವರವನ್ನು ಮೈಕ್ ಅನೌನ್ಸ್‌ಮೆಂಟ್ ಮೂಲಕ ಪ್ರಚಾರಪಡಿಸಲಾಗುವುದು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಂದ ಚುನಾವಣಾಧಿಕಾರಿಗಳಿಗೆ ನಂತರ ಚುನಾವಣಾ ವೀಕ್ಷಕರ ಅನುಮೋದನೆ ಪಡೆದ ನಂತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಹಾಸನ ಲೋಕಸಭಾ ಕ್ಷೇತ್ರದ ೦೮ ವಿಧಾನಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧೪ ಟೇಬಲ್‌ಗಳನ್ನು ನಿಗಧಿಪಡಿಸಲಾಗಿದ್ದು, (೧೪*೮=೧೧೨+೧೪=೧೨೬ ಟೇಬಲ್) ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆ ಸುತ್ತುಗಳನ್ನು ನಿಗದಿಪಡಿಸಿದೆ. ಚುನಾವಣಾ ಅಭ್ಯರ್ಥಿಗಳು / ಚುನಾವಣಾ ಅಧಿಕೃತ ಏಜೆಂಟರು ನಮೂನೆ-೧೮ ರಲ್ಲಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಬಣ್ಣದ ಗುರುತಿನ ಚೀಟಿಯನ್ನು ಕೌಟಿಂಗ್ ಏಜೆಂಟ್‌ರವರಿಗೆ ಒದಗಿಸಲಾಗುವುದು.

ಸದರಿಯವರು ಅವರಿಗೆ ನಿಗಧಿಪಡಿಸಿರುವ ವಿಧಾನಸಭಾ ಕ್ಷೇತ್ರವಾರು ನಿಗದಿಯಾಗಿರುವಂತೆ ಗುರುತಿನ ಚೀಟಿಯನ್ನು ತೋರಿಸಿ ಎಣಿಕೆ ಕೊಠಡಿಯನ್ನು ಪ್ರವೇಶ ಮಾಡಬಹುದಾಗಿದೆ ಎಂದರು.

ಮತ ಎಣಿಕೆ ಕೇಂದ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟ್, ಮತ ಎಣಿಕೆ ಎಜೆಂಟರ ಪ್ರವೇಶ ದ್ವಾರದ ಬಗ್ಗೆ ಮಾಹಿತಿ ನೀಡಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಬಣ್ಣದ ಪಾಸ್‌ಗಳನ್ನು ನೀಡಲಾಗುವುದು. ಏಜೆಂಟರು ತಮಗೆ ನಿಗಧಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗಧಿಪಡಿಸಿರುವ ಕೌಂಟಿಂಗ್ ಕೊಠಡಿಯನ್ನು ಬಿಟ್ಟು ಬೇರೆ ಬೇರೆ ಕಡೆಗೆ ಹೋಗುವಂತಿಲ್ಲ.

ಹಾಗೆಯೇ ಬೇರೆ ಕ್ಷೇತ್ರದ ಎಣಿಕಾ ಕೊಠಡಿಗೆ ಪ್ರವೇಶಿಸಿದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಹೊರಗೆ ಹಾಕುವ ಅಧಿಕಾರವನ್ನು ಚುನಾವಣಾಧಿಕಾರಿಗಳು ಹೊಂದಿರುತ್ತಾರೆ ಎಂದು ಎಚ್ಚರಿಸಿದರು.

ಎಣಿಕಾ ಕೆಂದ್ರಕ್ಕೆ ಕಡ್ಡಾಯವಾಗಿ ಮೊಬೈಲ್, ನೀರಿನ ಬಾಟಲ್, ಬೆಂಕಿ ಪೊಟ್ಟಣ, ಲೈಟರ್, ಧೂಮಪಾನ, ಹರಿತವಾದ ಆಯುಧಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಇಂತಹ ವಸ್ತುಗಳನ್ನು ತರದಂತೆ ತಿಳಿಸಿದೆ.

ಟೇಬಲ್‌ಗಳ ಸುತ್ತಲೂ ಹಾಕಿರುವ ವೈರ್ ಮೆಷ್‌ನ್ನು ದಾಟಿ ಹೋಗಲು ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರುಗಳಿಗೆ ಅವಕಾಶ ನೀಡಲಾಗುವುದಿಲ್ಲ. ಎಣಿಕಾ ಕೇಂದ್ರ ಮತ್ತು ಎಣಿಕಾ ಕಾರ್ಯದ ಎಲ್ಲಾ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಣಾವಲಿನಲ್ಲಿ ಕೈಗೊಳ್ಳಲಾಗುವುದು ಹಾಗೂ ಎಣಿಕಾ ಕೇಂದ್ರದ ಸುತ್ತ ಭದ್ರತೆಯನ್ನು ಒದಗಿಸಲಾಗಿರುತ್ತದೆ.

ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಮತ ಎಣಿಕೆ ಮುಖ್ಯ ಪ್ರವೇಶದ್ವಾರದ ಬಳಿ ಮೊಬೈಲ್ ಡೆಪಾಸಿಷನ್ ಕೇಂದ್ರ ತೆರೆಯಲಾಗಿದ್ದು, ಫ್ರಿಸ್ಟಿಂಗ್ (ಮೊಬೈಲ್ ತಪಾಸಣೆ) ಮಾಡಲಾಗುವುದು. ಮೊಬೈಲ್‌ಗಳನ್ನು ಒಂದು ಬಾರಿ ವಾಪಸ್ ಪಡೆದುಕೊಂಡು ಹೊರಭಾಗಕ್ಕೆ ತೆರಳಿದ ನಂತರ ಮತ್ತೆ ಒಳಗೆ ಬರಲು ಅವಕಾಶ ಕಲ್ಪಿಸಲಾಗುವುದಿಲ್ಲ. ಪ್ರತ್ಯೇಕ ಪೈಡ್ ಫುಡ್ ಕೌಂಟರ್ ಮತ್ತು ಪ್ರತ್ಯೇಕ ಕ್ಯಾಂಡಿಡೇಟ್ ಫಿಸಿಲಿಟೇಷನ್ ಕೇಂದ್ರವನ್ನು ಕೊಠಡಿ ಸಂಖ್ಯೆ: ೧೩೭ರಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಮಾಹಿತಿ ಕೇಂದ್ರದಿಂದ ಮತದಾರರ/ಸಾರ್ವಜನಿಕರ ಸಹಾಯವಾಣಿ ೧೯೫೦ ಆಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾಯವಾಣಿ ೧೯೫೦ ಕೇಂದ್ರವನ್ನು ಕಂಟ್ರೋಲ್ ರೂಮ್ ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಕ್ಕೆ ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಚುನಾವಣೆ ಸಂಬಂಧ ದೂರುಗಳನ್ನು ಸಲ್ಲಿಸಬಹುದಾಗಿದೆ ಹಾಗೂ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಮತ ಎಣಿಕೆ ಕೇಂದ್ರದ ಹೊರ ಆವರಣದ ಸುತ್ತ ಸಿಸಿ ಕ್ಯಾಮರಾ ಅಳವಡಿಸಿದ್ದು, ಪ್ರತಿಯೊಂದು ಮತ ಎಣಿಕೆ ಕೊಠಡಿಯಲ್ಲಿನ ಎಲ್ಲಾ ೧೪ ಮತ ಎಣಿಕೆ ಟೇಬಲ್‌ನಲ್ಲಿಯೂ ಪ್ರತ್ಯೇಕವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎಣಿಕಾ ಕೇಂದ್ರದಲ್ಲಿ ಎಣಿಕಾ ಏಜೆಂಟ್‌ಗಳು ಎಣಿಕೆ ಪ್ರಕ್ರಿಯೆಯ ವೇಳೆ ಮೊದಲ ಸಾಲಿನಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಏಜೆಂಟರು, ನಂತರ ನೋಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷದ ಅಭ್ಯರ್ಥಿಗಳ ಏಜೆಂಟರು ನಂತರ ಪಕ್ಷೇತರ ಅಭ್ಯರ್ಥಿಗಳ ಏಜೆಂಟರು ಈ ಕ್ರಮದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.

ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವುದಕ್ಕಿಂತ ಮೊದಲು ಪ್ರಜಾ ಪ್ರಾತಿನಿಧ್ಯ ಕಾಯ್ದೆ ೧೯೫೧ ರ ಕಲಂ ೧೨೮ ರ ಪ್ರಕಾರ ಮತದಾನದ ರಹಸ್ಯವನ್ನು ಕಾಯ್ದುಕೊಳ್ಳುವ ಪ್ರತಿಜ್ಞೆಯನ್ನು ಬೋಧಿಸಲಾಗುವುದು ಎಂದರು. ಮತ ಎಣಿಕೆ ಏಜೆಂಟ್ ಎಣಿಕೆ ಕೇಂದ್ರಕ್ಕೆ ಕೇವಲ ಸಾಮಾನ್ಯ ಪೆನ್ನು, ಹಾಳೆ ಬರೆದುಕೊಳ್ಳಲು ಹಾಗೂ ನೋಟ್ ಪ್ಯಾಡ್ ಮಾತ್ರ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ. ಮತ ಎಣಿಕೆ ಮುಕ್ತಾಯವಾದ ನಂತರ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ೦೫ ಮತಗಟ್ಟೆಗಳ ವಿವಿ ಪ್ಯಾಟ್ ಸ್ಲಿಪ್‌ಗಳನ್ನು ರ್ಯಾಂಡಮ್ ಆಗಿ ಎಣಿಕೆ ಮಾಡಲಾಗುವುದು ಹಾಗೂ ಮತ ಎಣಿಕೆ ನಂತರ ಇ.ವಿ.ಎಂ. ಮತ್ತು ಕಾಗದ ಪತ್ರಗಳನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಡೈರಿ ವೃತ್ತ, ಹಾಸನ ಇಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಭದ್ರತಾ ಕೊಠಡಿಯಲ್ಲಿ ಹಾಜರಿರುವ ಅಭ್ಯರ್ಥಿಗಳ ಸಮಕ್ಷಮ ಇರಿಸಲಾಗುವುದು ಎಂದು ಲೋಖಸಭಾ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾತನಾಡಿ, ೨೦೨೪ರ ಲೋಕಸಭಾ ಚುನಾವಣೆಯ ಮತ ಏಣಿಕೆ ಪ್ರಕ್ರಿಯೇ ಜೂನ್ ೪ ರಂದು ಕೌಂಟಿಂಗ್ ನಡೆಯಲಿದ್ದು, ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಏಣಿಕೆಗೆ ಸಿದ್ಧಪಡಿಸಲಾಗಿದೆ. ನಮ್ಮ ಪೊಲೀಸ್ ಕಡೆಯಿಂದ ೨೦೦ ರಿಂದ ೨೫೦ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಎರಡು ಕಡೆ ಒಳ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಒಂದು ಕಡೆ ಅಭ್ಯರ್ಥಿ ಹಾಗೂ ಏಜೆಂಟ್ ಪ್ರವೇಶ. ಇನ್ನೊಂದು ಕಡೆ ಅಧಿಕಾರಿಗಳು ಬಂದು ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಯಾರು ಕೂಡ ಮೊಬೈಲ್ ಜೊತೆ ಹೋಗುವಾಗಿಲ್ಲ. ಮತ ಏಣಿಕೆ ವೇಳೆ ೧೪೪ ಸೆಕ್ಷೆನ್ ಜಾರಿಯಲ್ಲಿದ್ದು, ಯಾರು ಕೂಡ ಗುಂಪಾಗಿ ವಿಜಯೋತ್ಸವ ಮಾಡಲು ಅವಕಾಶ ಇರುವುದಿಲ್ಲ.

ಈ ಬಗ್ಗೆ ನಿಗಾವಹಿಸಲಾಗುವುದು ಎಂದು ಎಚ್ಚರಿಸಿದರು. ಮತ ಏಣಿಕೆ ವೇಳೆ ಯಾವುದೇ ಗೊಂದಲ ಆಗದಂತೆ ಪೊಲೀಸ್ ಇಲಾಖೆಯಿಂದ ನಿಗಾವಹಿಸಿರುವುದಾಗಿ ಮಾಹಿತಿ ನೀಡಿದರು.

ಇದೆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಇತರರು ಉಪಸ್ಥಿತರಿದ್ರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *