ಕುಣಿಗಲ್: ನಿಂತಿದ್ದ ಬಸ್ ಗೆ ಟೆಂಪೋ ಟ್ರಾವಲ್ಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಜ್ಯ ಹೆದ್ದಾರಿ 33 ಹುಲಿಯೂರುದುರ್ಗ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ಬಳಿ ಮೇ. 25ರ ಗುರುವಾರ ಬೆಳಗ್ಗೆ ಸಂಭವಿಸಿದೆ.ರಾಯಚೂರು ಜಿಲ್ಲೆ ಸಿಂಧನೂರು ನಿವಾಸಿ ಟಿಟಿ ಚಾಲಕ ವೀರೇಶ್ (30), ಶಶಿಕಲಾ (69) ಮೃತಪಟ್ಟವರಾಗಿದ್ದು, ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ, ಪ್ರತೀಕ್ಷಾ ಗಾಯಗೊಂಡಿದ್ದಾರೆ. ಇವರುಗಳು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ವಿವರ: ಶಶಿಕಲಾ ಹಾಗೂ ಅವರ ಕುಟುಂಬದ 11 ಮಂದಿ ಸಿಂಧನೂರಿನಿಂದ ಮೈಸೂರು ಜಿಲ್ಲೆ ಪ್ರವಾಸಕ್ಕೆಂದು ಬುಧವಾರ ರಾತ್ರಿ 10 ಗಂಟೆಗೆ ಹೊರಟರು, ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ಹೋಗುವ ಸಂದರ್ಭ ಗುರುವಾರ ಬೆಳಗ್ಗೆ ಡಿ.ಹೊಸಹಳ್ಳಿ ಗ್ರಾಮದ ಬಳಿ ನಿಂತಿದ್ದ ಖಾಸಗಿ ಬಸ್ ಗೆ ಟಿಟಿ ಢಿಕ್ಕಿ ಹೊಡೆದಿದೆ.ಅಪಘಾತದ ಪರಿಣಾಮ ಚಾಲಕ ವೀರೇಶ್ ಸ್ಥಳದಲ್ಲೇ ಮೃತಪಟ್ಟು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಶಶಿಕಲಾ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.