ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ.ವಿಧಾಣಸಭೆ ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ಜೆಡಿಎಸ್ ಯುವಕ ಘಟಕ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.ಪ್ರಸಕ್ತ ವಿಧಾನಸಭೆ ಚುನಾವಣೆ ಫಲಿತಾಂಶ ನನಗೆ ಅತೀವ ಬೇಸರ ಉಂಟು ಮಾಡಿದ ಎನ್ನುವುದರ ಜತೆಗೆ, ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ವಿಶ್ವಾಸದಿಂದ ಹೇಳಬಯಸುತ್ತೇನೆ. ಇಷ್ಟು ದಿನ ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ) ಘಟಕದ ಅಧ್ಯಕ್ಷನಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಸಾಹೇಬರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ತಮ್ಮಗಳ ಮಾರ್ಗದರ್ಶನದಿಂದ ನನ್ನ ಕೈಲಾದ ಮಟ್ಟಿಗೆ ಕರ್ತವ್ಯ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆ ಮಾಡಲು ಶ್ರಮಿಸಿದ್ದೇನೆ ಎಂದಿದ್ದಾರೆ.ಆದರೆ, ಸೋಲೇ ಅಂತಿಮವಲ್ಲ, ಈ ಚುನಾವಣೆಯ ಸೋಲನ್ನು ಮಟ್ಟ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ನಾವೆಲ್ಲರೂ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ. ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕ ಪ್ರದೇಶ ಜನತಾದಳ (ಕರ್ನಾಟಕ) ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅದನ್ನು ತಾವು ಅಂಗಿಕಾರ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.ನನ್ನ ಈ ನಿರ್ಧಾರವನ್ನು ತಾವು ಒಪ್ಪಿ ನವ ನಾಯಕತ್ವಕ್ಕೆ ಅನುವು ಮಾಡಿಕೊಟ್ಟು ಪಕ್ಷವನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಒಟ್ಟಾಗಿ ಸಾಗಬೇಕಿದೆ ಎನ್ನುವುದು ನನ್ನ ವಿನಮ್ಮ ಸಲಹೆ ಮತ್ತು ಮನವಿ, ತಮ್ಮ ಹಾಗೂ ವರಿಷ್ಠರ ಆಶಯ, ಪಕ್ಷದ ಹಿತದೃಷ್ಟಿಯಿಂದ ಸಂಘಟನೆ ಕೆಲಸಕ್ಕೆ ನಾನು ಸದಾ ಸಿದ್ಧ. ಯುವ ಸಮುದಾಯದ ಜತೆ ಸೇರಿ ಪಕ್ಷ ಕಟ್ಟುವುದಕ್ಕೆ ನಾನೆಂದೂ ಹಿಂಜರಿಯುವುದಿಲ್ಲ. ನನ್ನ ಭಾವನೆಗಳನ್ನು ತಾವು ಗೌರವಿಸುವಿರಿ ಎನ್ನುವ ವಿಶ್ವಾಸದೊಂದಿಗೆ ಇಷ್ಟು ದಿನ ನನ್ನೊಂದಿಗೆ ಶ್ರಮಿಸಿ ಪಕ್ಷಕ್ಕಾಗಿ ಹೆಗಲು ಕೊಟ್ಟ ಎಲ್ಲಾ ಹಿರಿ, ಕಿರಿಯರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.