ಹಾಸನ : ಅಡುಗೆ ಮಾಡುವ ಗ್ಯಾಸ್ ಸೋರಿಕೆಯಿಂದ ಮನೆ ಒಳಗೆ ಇದ್ದ ದಂಪತಿಗಳಿಗೆ ಸುಟ್ಟಗಾಯಗಳಾಗಿ ಮನೆಯ ವಸ್ತುಗಳು ಸುಟ್ಟು ಕರಕಲು ಆದ ಘಟನೆ ತಾಲೂಕಿನ ಕಬ್ಬತ್ತಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಗ್ಯಾಸ್ ಸಿಲೆಂಡರ್ ಸ್ಪೋಟದಲ್ಲಿ ಮನೆಯಲ್ಲಿದ್ದ ರಘು ಮತ್ತು ಭವ್ಯ ದಂಪತಿಗಳಿಗೆ ತೀವ್ರತರವಾದ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಗ್ಯಾಸ್ ಸಿಲೆಂಡರ್ ಸ್ಪೋಟವಾದ ರಭಸಕ್ಕೆ ಮನೆಯ ಹೆಂಚುಗಳು ಚಿಲ್ಲಾಪಿಲ್ಲಿಯಾಗಿ ಹಾರಿಹೋಗಿದೆ. ಮನೆ ಒಳಗೆ ಇದ್ದ ವಸ್ತುಗಳೆಲ್ಲಾ ಸಂಪೂರ್ಣ ಹಾನಿಯಾಗಿದೆ. ಸ್ಪೋಟವಾಗುವ ಕೆಲ ನಿಮಿಷಗಳ ಹಿಂದೆ ರಘು ಮತ್ತು ಭವ್ಯ ದಂಪತಿಗಳ ಮಕ್ಕಳು ಶಾಲೆಗೆ ತೆರಳಿದ್ದಾರೆ.
ಏನಾದರೂ ಮನೆಯಲ್ಲಿಯೇ ಇದ್ದಿದ್ದರೇ ಬಾರಿ ಅನಾಹುತವೇ ಸಂಭವಿಸುತಿತ್ತು. ವಿಚಾರವನ್ನು ಅಗ್ನಿಶಾಮಕದಳಕ್ಕೆ ಗ್ರಾಮಸ್ಥರು ಅನೇಕ ಬಾರಿ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲೆ ಇಲ್ಲ.
ತಕ್ಷಣ ಗ್ರಾಮಸ್ಥರು ಎಲ್ಲಾ ಸೇರಿ ನಲ್ಲಿಗಳಲ್ಲಿ ನೀರು ಆನ್ ಮಾಡಿ ಬೆಂಕಿ ನಂದಿಸಲು ಮುಂದಾದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.