ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಉತ್ತೊಳಲು ಗ್ರಾಮದ ಜಮೀನಿಗೆ ಐಬಿಸಿ ಎಸ್ಟೇಟ್ ಒಡೆತನ ಬೃಹತ್ ಕೆರೆ ಒಡೆದು ಉಂಟಾದ ದಿಢೀರ್ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಅರೇಹಳ್ಳಿ: ನಮ್ಮ ಗ್ರಾಮದ ಜಮೀನುಗಳಿಗೆ ಹೊಂದಿಕೊಂಡಂತಿರುವ ಐಬಿಸಿ ಕಾಫಿ ಎಸ್ಟೇಟ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಬೃಹತ್ ಕೆರೆ ನಿರ್ಮಾಣ ಮಾಡಿದ ಪರಿಣಾಮ ಹೆಚ್ಚು ನೀರು ಸಂಗ್ರಹಣೆಯಾಗಿ ಕೆರೆ ಒಡೆದು ದಿಢೀರ್ ಸೃಷ್ಟಿಯಾದ ಪ್ರವಾಹದಿಂದಾಗಿ ರೈತರಿಗೆ ಲಕ್ಷಾಂತರ ರೂ. ಬೆಳೆ ನಷ್ಟ ಸಂಭವಿಸಿದೆ ಎಂದು ಗ್ರಾಮದ ಯುವ ರೈತ ಈಶ್ವರ್ ಹೇಳಿದರು.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬದೇವನಹಳ್ಳಿ ಪಂಚಾಯಿತಿ ವ್ಯಾಪ್ತಿ ಉತ್ತೊಳಲು ಗ್ರಾಮದ ರೈತರ ಜಮೀನಿಗೆ ಕೆರೆ ನೀರು ನುಗ್ಗಿದ್ದರಿಂದ ಬೆಳೆ ಹಾನಿಯಾದ ಹಿನ್ನಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಣ್ಣ ರೈತರ ಜೀವನಕ್ಕೆ ಆಧಾರವಾಗಿರುವ ಜಮೀನುಗಳಿಗೆ ನೀರು ನುಗ್ಗಿ ಕೆಸರು ತುಂಬಿಕೊಂಡಿದೆ.

ಹಾಗಾಗಿ ಈ ವರ್ಷವಂತೂ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಮಂಜಪ್ಪ,ಚಂದ್ರೇಗೌಡ,ಬಸವರಾಜು,ಸೀತಮ್ಮ,ಯು.ಎಂ.ಇಂದಿರಾ, ಯು.ಡಿ ಮಂಜುನಾಥ್‌ರವರುಗಳಿಗೆ ಸೇರಿದ ೧೨ ಎಕರೆಯಷ್ಟು ಜಮೀನು ಜಲಾವೃತಗೊಂಡು ಲಕ್ಷಾಂತರ ರೂ.ನಷ್ಟವಾಗಿರುವುದರಿಂದ ಐಬಿಸಿ ಸಿಬ್ಬಂದಿಗಳಲ್ಲಿ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ಹಿರಿಯ ರೈತ ಕುಪ್ಪ ಸ್ವಾಮಿ ಯಾದವ್ ಮಾತನಾಡಿ, ಹಲವಾರು ವರ್ಷಗಳಿಂದ ಜಮೀನನ್ನೆ ನಂಬಿ ಬದುಕುತ್ತಿದ್ದೇವೆ. ಏಕಾಏಕಿ ನೀರು ಜಮೀನುಗಳಿಗೆ ನುಗ್ಗಿದ್ದರಿಂದ ನಾಟಿ ಮಾಡಬೇಕಾಗಿದ್ದ ಪೈರು ಸಂಪೂರ್ಣವಾಗಿ ಮಣ್ಣಿನಡಿ ಹೂತು ಹೋಗಿದ್ದು ಈ ಭಾರಿ ಹೇಗೆ ಜೀವನ ನಡೆಸುವುದು ಎಂಬ ಚಿಂತೆಯಾಗಿದೆ ಎಂದು ನೋವು ಹೊರಹಾಕಿದರು.

ರೈತ ಮಹಿಳೆ ಸೀತಮ್ಮ ಮಾತನಾಡಿ, ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದೇವೆ. ಇದ್ದಕ್ಕಿದ್ದಂತೆ ಕೆರೆ ಒಡೆದು ನಷ್ಟವಾದ ಹಿನ್ನಲೆ ರೈತರಿಗೆ ಸೂಕ್ತ ಪರಿಹಾರ ನೀಡಲೇಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಣ್ಣೇಗೌಡ, ಚಂದ್ರಶೇಖರ್, ಗಾಯಿತ್ರಿ, ಸುಮ, ಮಂಜುಳಾ, ಪಾರ್ವತಿ, ರುದ್ರೇಶ್,ರಾಜಪ್ಪ, ದರ್ಶನ್,ಮನೋಜ್ ಹಾಗೂ ಇನ್ನೂ ಮುಂತಾದವರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed