ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಸರ್ಕಾರದಿಂದ ಮೊದಲ ಸಿಹಿ ಸುದ್ದಿ: ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರದೊಳಗೆ ರಾಜ್ಯ ಸರ್ಕಾರಿ ನೌಕರರಿಗೆ ಮೊದಲ ಸಿಹಿ ಸುದ್ದಿ ನೀಡಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯ ನೌಕರರು ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಇದೀಗ ಕೇಂದ್ರ ಸರ್ಕಾರದಂತೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಹಿ ಹಾಕಿದ್ದಾರೆ. ಆರ್ಥಿಕ ಇಲಾಖೆಯು ಗುರುವಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಿದೆ.ಏಪ್ರಿಲ್ 3ರಂದು ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯ ಸರ್ಕಾರ ಕೂಡ ಹೆಚ್ಚಳ ಮಾಡುವುದು ವಾಡಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ.ಜನವರಿ 1ರಿಂದ ರಾಜ್ಯ ಸರ್ಕಾರಿ ನೌಕರರಿಗೆ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ. 4ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕೆಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ ನೂತನ ಸರ್ಕಾರವನ್ನೂ ಕೋರಿದ್ದರು. ಬುಧವಾರ ಈ ಸಂಬಂಧದ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಧನ್ಯವಾದ ತಿಳಿಸಿದ್ದಾರೆ. ಗುರುವಾರವೇ ಶೇ. 4 ಬಾಕಿ ತುಟ್ಟಿಭತ್ಯೆ ಆದೇಶವನ್ನು ದಿನಾಂಕ 01-01- 2023 ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯು ಆದೇಶ ಹೊರಡಿಸಲಿದೆ ಎಂದು ಷಡಕ್ಷರಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.7ನೇ ವೇತನ ಆಯೋಗದ ಮಧ್ಯಂತರ ಪರಹಾರವಾಗಿ ಶೇ.17 ವೇತನ ಹೆಚ್ಚಳ ಮಾಡಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಹೆಚ್ಚಳವನ್ನು ಏಪ್ರಿಲ್ ತಿಂಗಳ ವೇತನದಲ್ಲಿಯೇ ಜಾರಿಗೆ ತರಲಾಗಿದೆ.ರಾಜ್ಯ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಶೇ. 3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು. ಇದು 2022ರ ಜುಲೈ1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 1,282.72 ಕೋಟಿ ರೂ. ಭರಿಸಿತ್ತು. ಅದಕ್ಕೂ ಮೊದಲು ಏಪ್ರಿಲ್‌ನಲ್ಲಿ ಶೇ. 2.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಇದು ಜನವರಿ 1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ 1,447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಿತ್ತು.