ಅರೇಹಳ್ಳಿ : ಕಾಡಾನೆಗಳ ದಾಳಿಯಿಂದ ಕಾಫಿ ತೋಟಗಳು ಸರ್ವನಾಶವಾಗಿರುವುದಕ್ಕೆ ಕಾಫಿ ತೋಟಗಳ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಬಿಳಗವಳ್ಳಿ ಗ್ರಾಮಕ್ಕೆ ತಾಲೂಕು ವ್ಯಾಪ್ತಿ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದ ವೇಳೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಗೊಂಡ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು.
ಹಾಸನ ಜಿಲ್ಲಾ ಅರಣ್ಯಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡುವಂತೆ ಬಿಗಿಪಟ್ಟು ಹಿಡಿದ ಕಾಫಿ ಬೆಳೆಗಾರರ ಮನವಿಗೆ ಸ್ಪಂದಿಸಿದ ಡಿಎಫ್‌ಒ ಸೌರಭ್ ಕುಮಾರ್ ಖುದ್ದು ಭೇಟಿ ಕಾಫಿ ಬೆಳೆಗಾರರೊಂದಿಗೆ ಚರ್ಚಿಸಿದರು.
ಈ ವೇಳೆ ಕಾಫಿ ಬೆಳೆಗಾರ ಚೇತನ್ ಪ್ರಕಾಶ್ ಮಾತನಾಡಿ, ನಾಲ್ಕೈದು ಗುಂಪಿನ ಕಾಡಾನೆಗಳು ಒಟ್ಟೊಟ್ಟಿಗೆ ಕಾಫಿ ತೋಟಗಳಿಗೆ ದಾಂಗುಡಿಯಿಡುತ್ತಿರುವುರಿಂದ ಹಲವಾರು ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಕಾಫಿ ಗಿಡಗಳು ನೆಲಕಚ್ಚಿವೆ. ಚಿಕ್ಕಮಗಳೂರು ವಿಭಾಗದಿಂದ ಚೀಕನಹಳ್ಳಿ ಮಾರ್ಗವಾಗಿ ಇನ್ನೊಂದು ಕಾಡಾನೆಯ ಗುಂಪು ಅರೇಹಳ್ಳಿ ಹೋಬಳಿ ಕಡೆ ಬಂದಿರುವ ಮಾಹಿತಿಯಿದೆ.
ಆನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವುದೊಂದೆ ಸಮಸ್ಯೆಗಿರುವ ಪರಿಹಾರ. ಕೇವಲ ಕಣ್ಣೊರೆಸುವ ತಂತ್ರವಾಗಿ ಬೆಳೆನಷ್ಟವನ್ನು ಭರಿಸುವುದಕ್ಕಿಂತ ನಷ್ಟಗೊಂಡ ಬೆಳೆಗಾರರಿಗೆ ಎಕರೆಗೆ ಇಂತಿಷ್ಟು ಎಂದು ಸೂಕ್ತ ಪರಿಹಾರವನ್ನು ನೀಡಲೇಬೇಕು. ಪಟಾಕಿ ಸಿಡಿಸಿ ಭಯಪಡಿಸಿ ಆನೆಗಳನ್ನು ಓಡಿಸುವುದರಿಂದ ಬೆಳೆ ಇನ್ನಷ್ಟು ಹಾನಿಯಾಗುವುದು. ಆದ್ದರಿಂದ ಆನೆಗಳನ್ನು ನಾಜೂಕಾಗಿ ಬೇರೆಡೆಗೆ ಓಡಿಸುವ ತಂತ್ರವನ್ನು ಆನೆ ಕಾರ‍್ಯಪಡೆ ತಂಡಕ್ಕೆ ತರಬೇತಿ ನೀಡಬೇಕು ಎಂದರು.
ಡಿಎಫ್‌ಒ ಸೌರಭ್ ಕುಮಾರ್ ಮಾತನಾಡಿ, ವಿಪರೀತ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಈಗಾಗಲೆ ಸ್ಥಳಾಂತ ಮಾಡಲಾಗಿದೆ. ಸಂಪೂರ್ಣ ಆನೆಗಳ ಶಾಶ್ವತ ಸ್ಥಳಾಂತರ ಕಷ್ಟಸಾಧ್ಯ. ಕಾಡಾನೆಗಳಿಂದ ಉಂಟಾಗಿರುವ ಬೆಳೆನಷ್ಟದ ಅಂಕಿ ಅಂಶಗಳನ್ನು ಸೂಕ್ತವಾಗಿ ಪರಿಶೀಲಿಸಿ ಎಕ್ಸ್ ಗ್ರೇಷಿಯಾ ನೀಡಲಾಗುವುದು. ಚಿಕ್ಕಮಗಳೂರು ವಿಭಾಗದಿಂದ ಕಾಡಾನೆಗಳನ್ನು ಹಾಸನ ಸರಹದ್ದು ವ್ಯಾಪ್ತಿಗೆ ಓಡಿಸದಂತೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ವೇಳೆ ಬೇಲೂರು ವಲಯಾರಣ್ಯಾಧಿಕಾರಿ ವಿನಯ್ ಕುಮಾರ್ ಹಾಗೂ ಇತರ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಫಿ ಬೆಳೆಗಾರರಾದ ಹರೀಶ್ ಬಿ.ಪಿ, ಮಹೇಂದ್ರ, ಕಾಂತರಾಜು, ಪರಮೇಶ್, ಶಿವಪ್ಪ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಇದ್ದರು.