
ಅರೇಹಳ್ಳಿ : ಕಣದಲ್ಲಿ ಒಣಹಾಕಿದಾಗ ಅಥವಾ ಗೋದಾಮಿನಲ್ಲಿ ಕಳುವಾಗುತ್ತಿದ್ದ ಕಾಫಿ ಇದೀಗ ಖದೀಮರು ಗಿಡಗಳಲ್ಲಿಯೆ ರೆಂಬೆ ಸಮೇತ ಹಸಿ ಕಾಫಿಯನ್ನು ಕಳವು ಮಾಡುತ್ತಿರುವ ಪರಿಣಾಮ ಬೆಳೆಗಾರರ ಆತಂಕ ಇಮ್ಮಡಿಯಾಗಿದ್ದು ಭದ್ರತಾ ದೃಷ್ಟಿಯಿಂದ ತೋಟಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಮುಂದಾಗುತ್ತಿದ್ದಾರೆ.
ಇದೇ ಮೊಟ್ಟ ಮೊದಲ ಬಾರಿಗೆ 50 KG ಗೆ 22,000 ರೂ.ಗಳ ಗಟಿ ದಾಟಿರುವ ಕಾಫಿ ಧಾರಣೆಯಿಂದ ಪ್ರಚೋದನೆಗೆ ಒಳಗಾಗಿರುವ ಕಳ್ಳರು ಕಾಫಿ ಹಣ್ಣು ಬಿಡಿಸಲು ತಡವಾಗುತ್ತದೆ ಎಂಬ ಕಾರಣದಿಂದ ರೆಂಬೆಗಳನ್ನು ಉದ್ದುದ್ದ ಕತ್ತರಿಸಿ ಚೀಲದಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದಾರೆ.
ಇತ್ತೀಚೆಗೆ ಬೇಲೂರು ತಾಲೂಕು ಗೆಂಡೇಹಳ್ಳಿ ಸಮೀಪದ ಕೀತೂರು ಕಾಫಿ ಎಸ್ಟೇಟ್‍ನಲ್ಲಿ ಮೂಟೆಯಲ್ಲಿ ದೊರೆತ ರೆಂಬೆ ಸಮೇತ ಹಸಿ ಕಾಫಿ ಕಳ್ಳರು ಕದಿಯಲು ಕಂಡುಕೊಂಡಿರುವ ಅನೈತಿಕ ಮಾರ್ಗ ಬೆಳಕಿಗೆ ಬಂದಿದೆ.
ಕೆಲವಾರು ವರ್ಷಗಳ ಹಿಂದೆ ಕಪ್ಪು ಚಿನ್ನ ಎಂಬ ಖ್ಯಾತಿ ಪಡೆದಿರುವ ಕರಿಮೆಣಸು ಕೆ.ಜಿ ಗೆ 800 ರೂ. ಗಡಿ ದಾಟಿದ್ದ ವೇಳೆ ಮೆಣಸು ಕಳ್ಳತನ ಪ್ರಕರಣ ವಿಪರೀತವಾಗಿತ್ತು. ಖದೀಮರು ರಾತ್ರಿಯಾಗುವುದನ್ನೆ ಕಾದು ಅಧಿಕ ಫಸಲಿರುವ ತೋಟಗಳಿಗೆ ತೆರಳಿ ಹಸಿ ಮೆಣಸನ್ನು ಕದಿಯುತ್ತಿದ್ದರು. ಕುಯ್ಯುವ ವೇಳೆ ಮೆಣಸು ಬಳ್ಳಿಗಳನ್ನು ಬಲವಂತವಾಗಿ ಎಳೆದು ನಾಶಪಡಿಸುತ್ತಿದ್ದರು.
ಅರೇಬಿಕಾ,ರೊಬಸ್ಟಾ ಕಾಫಿಯ ಪಾರ್ಚ್‍ಮೆಂಟ್ ಹಾಗೂ ಚೆರ್ರಿ ಬೆಲೆ ವಿಪರೀತವಾಗಿ ಹೆಚ್ಚಳವಾಗಿರುವುದರಿಂದ ಬೆಳೆಯನ್ನು ಉಳಿಸಿಕೊಳ್ಳುವ ಸವಾಲು ಬೆಳೆಗಾರರಿಗೆ ಎದುರಾಗಿದೆ. ಕೆಲವು ತೋಟದ ಮಾಲೀಕರು ಬೆಳೆ ಕಾಯಲು ಕಾವಲುಗಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇನ್ನೂ ಹಲವರು ಕೂಲಿ ಕಾರ್ಮಿಕರ ಅಲಭ್ಯತೆ,ಕಳ್ಳರ ಸಮಸ್ಯೆ, ಆನೆ ಹಾವಳಿಗಳಿಂದ ಬೇಸತ್ತು ಕಾಫಿ, ಮೆಣಸು, ಏಲಕ್ಕಿ, ಕಿತ್ತಳೆಯಂತಹ ಬೆಳೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಹುಂಡಿ ರೂಪದಲ್ಲಿ ನೀಡಿ ತಲೆ ಹೊರೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಳೆಗಾರರು ತಮ್ಮ ತೋಟಗಳಿಗೆ ಮುಂಜಾಗೃತ ಕ್ರಮವಾಗಿ ಸೂಕ್ತ ಭದ್ರತೆಯನ್ನು ನೀಡಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಚಲಿಸುವ ವಸ್ತುವನ್ನು(ಮೋಷನ್ ಸೆನ್ಸಾರ್) ಸುಲಭವಾಗಿ ಗುರುತಿಸಬಲ್ಲ ಹೈ ಸೆಕ್ಯುರಿಟಿ ರೋಬೋಟಿಕ್, ಐಪಿ ಕ್ಯಾಮೆರಾಗಳಿಗೆ ಸಾವಿರಾರು ರೂ.ಗಳನ್ನು ವ್ಯಯಮಾಡಿ ಕಾಫಿ ಕಣ, ಗೋದಾಮು ಹಾಗೂ ತೋಟಗಳಲ್ಲಿ ಅಳವಡಿಸುತ್ತಿದ್ದಾರೆ. ಈ ಕ್ಯಾಮರಾಗಳು ಚಿತ್ರಗಳನ್ನು ಸೆರೆಹಿಡಿದು ತಕ್ಷಣ ಮಾಲೀಕರ ಮೊಬೈಲ್‍ಗೆ ಇಮೇಜ್ ಅನ್ನು ಕಳುಹಿಸುವುದರ ಮೂಲಕ ಪರೋಕ್ಷವಾಗಿ ಬೆಳೆಗಳಿಗೆ ರಕ್ಷಣೆ ನೀಡುತ್ತಿದೆ.
ಅಸ್ಸಾಂ ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿರುವ ಮತ್ತು ಸ್ಥಳೀಯ ಕೂಲಿ ಕಾರ್ಮಿಕರು ಕಳ್ಳತನದಲ್ಲಿ ಭಾಗಿಯಾಗುತ್ತಿರುವುದರಿಂದ ಮಾಲೀಕರು ಕಾರ್ಮಿಕರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ.
ಸಂತೆಯ ದಿನ ಬ್ಯಾಗ್‍ಗಳಲ್ಲಿ ತುಂಬಿಸಿಕೊಂಡು ಗುಪ್ತವಾಗಿ ಮಾರಾಟ ಮಾಡುತ್ತಿದ್ದು,ಕದ್ದ ಮಾಲನ್ನು ತೆಗೆದುಕೊಳ್ಳುವ ವ್ಯಾಪಾರಿಗಳಿಗೆ ಕಾನೂನಿನ ಮೂಲಕ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆಯಿದೆ.
