ಹಾಸನ : ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕ್ಷಣಾರ್ಧದಲ್ಲಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿದ್ದು, ನಿವಾಸದ ಒಳಗಿದ್ದ ಐದು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದಹೊಸಲೈನ್ ರಸ್ತೆಯಲ್ಲಿ ಸಂಭವಿಸಿದೆ.
ಮುಸ್ತಾಫ್ ಎಂಬುವವರಿಗೆ ಸೇರಿದ ವಾಸದ ಮನೆಯ ರೆಫ್ರಿಜರೇಟರ್‌ನಲ್ಲಿ ಕಾಣಿಸಿಕೊಂಡು ಶಾರ್ಟ್ ಸರ್ಕ್ಯೂಟ್ ಮನೆಗೆ ಬೆಂಕಿ ತಗುಲಿದೆ. ಆರು ಮನೆಗಳಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಮನೆಯಲ್ಲಿ ಬೆಂಕಿ ಅವಘಡ ನಡೆದಿದ್ದು, ರೆಫ್ರಿಜರೇಟರ್‌ನ ಪಕ್ಕದಲ್ಲಿಯೇ ಇದ್ದ ಗ್ಯಾಸ್ ಸಿಲಿಂಡರ್ ಸುತ್ತ ಬೆಂಕಿ ಹೊತ್ತಿ ಉರಿದರು ಆಶ್ಚರ್ಯ ರೀತಿ ಸಿಲಿಂಡರ್ ಸ್ಪೋಟಗೊಳ್ಳಲಿಲ್ಲ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಮುಂದಾದರು. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವ ಮೊದಲೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಿಂದ ಹೊರಗೆ ಮನೆ ಮಂದಿ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಅವಘಡದ ಬಗ್ಗೆ ಕೆಲ ಸಮಯ ಪರಿಶೀಲನೆ ನಡೆಸಿದರು.