ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾಧ್ಯಕ್ಷ ಮಾ.ಹನುಮಂತೇಗೌಡರು ಭಾನುವಾರದಂದು ಬೆಳಗ್ಗೆ ೧೦-೨೦ರ ಸಮಯದಲ್ಲಿ ಜಯನಗರದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ
ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಶ್ರೀಯುತರು ಮಾಜಿ ಶಾಸಕರು, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾಗಿದ್ದ ದಿವಂಗತ ಹೆಚ್.ಬಿ. ಜ್ವಾಲನಯ್ಯನವರ ಅವಧಿಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾಷೆ ಪಂಡಿತರಾಗಿದ್ದರು. ನಂತರ ಪ್ರೌಡಶಾಲೆಗೆ ಬಡ್ತಿ ಹೊಂದಿ ಪ್ರೌಢಶಾಲೆಯಲ್ಲಿ ಭಾಷೆ ಪಂಡಿತರಾಗಿ ಸೇವೆ ಸಲ್ಲಿದ್ದರು.
ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರವನ್ನು ಜಯನಗರದ ಭಗತ್ ಸಿಂಗ್ ರಸ್ತೆ, ಎರಡನೇ ಅಡ್ಡ ರಸ್ತೆ, ಜಯನಗರ ಎರಡನೇ ಹಂತ, ವಿಶಾಲ ಮಾರ್ಟ್ ಹತ್ತಿರ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
೨೦೨೪ ಅಕ್ಟೋಬರ್ ೭ ಸೋಮವಾರದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದ ಮುಂಭಾಗದಲ್ಲಿ ಬೆಳಗ್ಗೆ: ೯ ಗಂಟೆಗೆ ಅವರ ಅಂತಿಮ ದರ್ಶನ ಮಾಡಲು ಇಡಲಾಗುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ಎಲ್. ಮಲ್ಲೇಶಗೌಡರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ:೧೦-೦೦ ನಂತರ ಅವರ ಸ್ವಂತ ಊರಾದ ಸಾಲಗಾಮೆ ರಸ್ತೆಯ ಮಾವಿನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರ ನಿಧನಕ್ಕೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾಧ್ಯಕ್ಷರಾದ ಬಿ.ಎನ್. ರಾಮಸ್ವಾಮಿ, ಹೆಚ್.ಬಿ. ಮದನಗೌಡ, ಡಾ. ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷರಾದ ರವಿನಾಕಲಗೂಡು, ಕಲ್ಲಹಳ್ಳಿಹರೀಶ, ಕತ್ತಿಮಲ್ಲೇನಹಳ್ಳಿ ಪರಮೇಶ್, ಹರಳಹಳ್ಳಿ ರಂಗಸ್ವಾಮಿ, ಸೋಮನಾಯಕ್, ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.